ಜಿಲ್ಲೆ

ಬಿಬಿಎಂಪಿಯಿಂದ ಅನಧಿಕೃತ ಒಎಫ್​​​ಸಿ ತೆರವಿಗೆ ಕಾರ್ಯಾಚರಣೆ

ಆರ್.ತುಳಸಿಕುಮಾರ್

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಒಎಫ್​​ಸಿ ಕೇಬಲ್‌ಗಳನ್ನು ತೆರವು ಮಾಡಲು ಈ ತಿಂಗಳಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಬಿಬಿಎಂಪಿ ನಿರ್ಧರಿಸಿದ್ದು, ಸೋಮವಾರದಿಂದಲೇ ಅಭಿಯಾನದ ರೀತಿ ಚಾಲನೆ ನೀಡಲಾಗಿದೆ.

ಪಾಲಿಕೆಯ ಎಲ್ಲ 8 ವಲಯಗಳಲ್ಲಿನ ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಕೇಬಲ್‌ಗಳನ್ನು ತೆರವುಗೊಳಿಸಬೇಕು. ಇದರ ಹೊಣೆಯನ್ನು ವಾರ್ಡ್‌ಗಳ ಸಹಾಯಕ ಮತ್ತು ಕಿರಿಯ ಅಭಿಯಂತರರಿಗೆ ವಹಿಸಲಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ಒಎಫ್​​ಸಿ ತೆರವು ಕಾರ್ಯಾಚರಣೆಯ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುವಂತೆ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ವಲಯ ವ್ಯಾಪ್ತಿಯಲ್ಲಿ ಮರ, ವಿದ್ಯುತ್ ಕಂಬಗಳ ಮೇಲೆ ಅನಧಿಕೃತ ಕೇಬಲ್​ಗಳನ್ನು ಅಳವಡಿಸಿದ್ದು, ನೆಲದ ಮೇಲ್ಮಟ್ಟದಲ್ಲಿ ಕಾಣುವ ರೀತಿಯಲ್ಲಿರುವ ಕಾರಣ ನಗರದ ಸೌಂದರ್ಯ ಕೂಡಾ ಹಾಳಾಗುತ್ತದೆ. ಹೀಗಾಗಿ ಅಂತಹ ಕೇಬಲ್​​ಗಳನ್ನು ಗುರುತಿಸಿ ತೆರವುಗೊಳಿಸಬೇಕು. ಅನಧಿಕೃತ ಕೇಬಲ್ ತೆರವು ಮಾಡಿದ ಬಳಿಕ ಒಎಫ್​​ಸಿ ಕಂಪನಿಗಳ ನಿರ್ವಹಣಾ ತಂಡಗಳು ಪುನಃ ಅನಧಿಕೃತ ಚಟುವಟಿಕೆಯಲ್ಲಿ ತೊಡಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

2 ವಲಯಗಳಲ್ಲಿ ಕಾರ್ಯಾಚರಣೆಗೆ ಚಾಲನೆ:

ಪ್ರಸ್ತುತ ಮಹದೇವಪುರ ವಲಯ ಹಾಗೂ ಪೂರ್ವ ವಲಯ ವ್ಯಾಪ್ತಿಯಲ್ಲಿ ಮಂಗಳವಾರ ಅನಧಿಕೃತ ಒಎಫ್​ಸಿ ಕೇಬಲ್‌ಗಳನ್ನು ತೆರವುಗೊಳಿಸಲಾಯಿತು. ಮಹದೇವಪುರ ವಲಯದ ಮಾರತಹಳ್ಳಿ ಮುಖ್ಯರಸ್ತೆ, ಕಗ್ಗದಾಸಪುರ, ದೊಡ್ಡನೆಕ್ಕುಂದಿ ಹಾಗೂ ಪೂರ್ವ ವಲಯದಲ್ಲಿ ಹಲಸೂರು ವ್ಯಾಪ್ತಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಇತರ ವಲಯಗಳಲ್ಲಿಯೂ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.