ಬೆಂಗಳೂರು: ನಾಗರಿಕರಿಗೆ ಇ-ಖಾತಾ ಸೌಲಭ್ಯವನ್ನು ತ್ವರಿತವಾಗಿ ನೀಡುವ ಉದ್ದೇಶದಿಂದ ಆನ್‌ಲೈನ್ ಹಾಗೂ ಫೇಸ್ ಲೆಸ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿತ ಮಟ್ಟದಲ್ಲಿ ಒದಗಿಸಲು ಬಿಬಿಎಂಪಿ ಮುಂದಾಗಿದೆ.
ಇಂಥದ್ದೊಂದು ವಿಶಿಷ್ಟ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯು ಜಾರಿ ಮಾಡಿದ್ದು, ನಾಗರಿಕರ ಮತ್ತು ಅಧಿಕಾರಿಗಳ ನಡುವಿನ ನೇರ ಸಂಪರ್ಕವನ್ನು ಕಡಿಮೆಗೊಳಿಸಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಇದೇ ರೀತಿ ಪಾಲಿಕೆ ಕೂಡ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನೀತಿಯಂತೆ ನಾಗರಿಕರು ಅರ್ಜಿ ಸಲ್ಲಿಸಿದ ದಿನ ಆಧರಿಸಿ ಅನುಷ್ಠಾನ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಪ್ರತಿ ಅಧಿಕಾರಿಯ ಲಾಗಿನ್‌ನಲ್ಲಿ ಅರ್ಜಿ ತಲುಪಿದ ಕ್ರಮದ ಆಧರಿಸಿ ಈ ಪದ್ಧತಿಯನ್ನು ಜಾರಿಗೊಳಿಸಲಾಗುತ್ತದೆ. ನಾಗರಿಕನಿಗೆ ಅರ್ಜಿಯು ಯಾವ ಅಧಿಕಾರಿ ಬಳಿಗೆ ಹೋಗಿದೆ ಎಂಬುದು ತಿಳಿಯದು. ಆದರೆ, ನಿಯಮಿತ ಸಮಯದಲ್ಲಿ ಅರ್ಜಿ ವಿಲೇವಾರಿಯಾಗುತ್ತದೆ. ಈ ವ್ಯವಸ್ಥೆ ಮಧ್ಯವರ್ತಿಗಳನ್ನು ನಿಯಂತ್ರಿಸಿ ಭ್ರಷ್ಟಾಚಾರಕ್ಕೆ ತಡೆ ಒಡ್ಡಲಿದೆ. ಹಾಗಾಗಿ ಸಾರ್ವಜನಿಕರು ಇ-ಖಾತಾ ಸೌಲಭ್ಯ ಪಡೆಯಲು ಆನ್‌ಲೈನ್ ಅಥವಾ ಫೇಸ್ ಲೆಸ್ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು ಎಂದು ಅವರು ಮನವಿ ಮಾಡಿದ್ದಾರೆ.
ಫೇಸ್ ಲೆಸ್ ವ್ಯವಸ್ಥೆ ನಿರ್ವಹಣೆ ಹೇಗೆ?:
ಇ-ಖಾತಾ ಮತ್ತು ಹೊಸ ಖಾತಾ ಅರ್ಜಿಗಳನ್ನು ಪಾಲಿಕೆ ವ್ಯಾಪ್ತಿಯ ಎಲ್ಲ ಅಧಿಕಾರಿಗಳಲ್ಲಿ ರಾಂಡಮ್ ವಿಧಾನದಲ್ಲಿ ಹಂಚಲಾಗುತ್ತದೆ. ಅರ್ಜಿ ಅನುಷ್ಠಾನವಾಗುತ್ತಿದ್ದಂತೆ ಹೊಸ ಅರ್ಜಿಯು ಸಾಫ್ಟ್‌ವೇರ್‌ನಿಂದ ತಾನಾಗಿಯೇ ಹಂಚಿಕೆಯಾಗುತ್ತದೆ. ಇದು ಪ್ರತಿ ಅರ್ಜಿ ಸ್ಥಳೀಯ ವಲಯದ ಹೊರಗೆ ಹೋಗುವುದರಿಂದ ಮಧ್ಯವರ್ತಿಗಳ ಪ್ರಭಾವ ಕಡಿಮೆಯಾಗುತ್ತದೆ.
ಅರ್ಜಿಯ ಅನುಷ್ಠಾನವು ನಾಗರಿಕರು ಸಲ್ಲಿಸಿದ ದಾಖಲೆ ಮತ್ತು ಮಾಹಿತಿ ಆಧರಿಸಿ ನಿಯಮ, ಕಾನೂನು ಮತ್ತು ಸುತ್ತೋಲೆ ಪ್ರಕಾರ ನಡೆಯುತ್ತದೆ. ಕಚೇರಿ ಮಟ್ಟದ ಅರ್ಜಿ ವಿಲೇವಾರಿ ಆಗಲಿದ್ದು, ನಾಗರಿಕರು ಹಾಗೂ ಅಧಿಕಾರಿಗಳು ಸಲ್ಲಿಸಿದ ದಾಖಲೆ ಮಾಹಿತಿ ಆಧರಿಸಿ ತೀರ್ಮಾನವಾಗುತ್ತದೆ. ಆರಂಭದಲ್ಲಿ ಲಭ್ಯ ನಾಗರಿಕ ಅರ್ಜಿಗಳ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಲಾಗಿನ್‌ಗೆ ಇ-ಖಾತಾ, ಹೊಸ ಖಾತಾ ಮತ್ತು ಇತರ ಖಾತಾ/ತೆರಿಗೆ ಸಂಬಂಧಿತ ಸೇವೆಗೆ 50 ಅರ್ಜಿಗಳನ್ನು ಹಂಚಲಾಗುತ್ತದೆ.
ಅರ್ಜಿ ವಿಲೇವಾರಿಗೆ ಗಡುವು:
ಪ್ರತಿ ಅಧಿಕಾರಿ ತಾನು ಲಾಗಿನ್ ಮಾಡಿದ ದಿನದಿಂದ 3 ದಿನದೊಳಗೆ ಅರ್ಜಿ ನಿರ್ವಹಿಸಬೇಕು. ಈ ಹಂತದಲ್ಲಿ ತಡವಾದರೆ ಲಾಗಿನ್‌ನಲ್ಲಿರುವ ಇತರ ಅರ್ಜಿಗಳನ್ನು ತೆಗೆದುಹಾಕಿ, ಇತರರಿಗೆ ಹಂಚಲಾಗುತ್ತದೆ. ಅಧಿಕಾರಿ ತಾನು ಲಾಗಿನ್ ಮಾಡಿದ 36 ಗಂಟೆಗಳೊಳಗೆ ಕನಿಷ್ಠ ಒಂದು ಅರ್ಜಿ ನಿರ್ವಹಿಸಬೇಕು. ಈ ಗಡುವು ಮೀರಿ ಹೋದರೆ, ಆ ಅರ್ಜಿಯೂ ಹಿಂಪಡೆಯಲಾಗುತ್ತದೆ ಮತ್ತು ವಲಯ ಜಂಟಿ ಆಯುಕ್ತರ ವಿಶೇಷ ಅನುಮೋದನೆಯಾಗದ ಹೊರತು ಅರ್ಜಿಗಳ ಹಂಚಿಕೆ ಆಗುವುದಿಲ್ಲ. ಮರುಹಂಚಿಕೆಯಾಗುವ ಅರ್ಜಿಗಳಿಗೆ ಇದೇ ನಿಯಮ ಅನ್ವಯಿಸಲಾಗುತ್ತದೆ. 2ನೇ ಲಾಗಿನ್‌ನಲ್ಲೂ 3 ದಿನದೊಳಗೆ ಅರ್ಜಿ ನಿರ್ವಹಣೆಯಾಗದಿದ್ದರೆ, ವಲಯ ಮಟ್ಟದ ವಿಶೇಷ ತಂಡಕ್ಕೆ ಮರುಹಂಚಿಸಲಾಗುತ್ತದೆ. ಇದನ್ನು ಉಪ ಆಯುಕ್ತರು, ಜಂಟಿ ಆಯುಕ್ತರು, ವಲಯ ಆಯುಕ್ತರು ಮತ್ತು ಕಂದಾಯ ವಿಭಾಗದ ವಿಶೇಷ ಆಯುಕ್ತರು ನೇರವಾಗಿ ಮೇಲ್ವಿಚಾರಣೆ ಮಾಡುತ್ತಾರೆ.
ಈ ವ್ಯವಸ್ಥೆಯನ್ನು ತಕ್ಷಣವೇ ಸಾಫ್ಟ್‌ವೇರ್ ಮೂಲಕ ಜಾರಿಗೊಳಿಸಲಾಗುವುದು ಎಂದು ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.