ಜಿಲ್ಲೆ

ಬಿಬಿಎಂಪಿ ನೇಪಥ್ಯಕ್ಕೆ, ಜಿಬಿಎ ಯುಗಾರಂಭ

ಆರ್.ತುಳಸಿಕುಮಾರ್

ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ರಾಜಧಾನಿ ಖ್ಯಾತಿಯ ಬೆಂಗಳೂರು ಮಹಾನಗರದ ಸ್ಥಳೀಯ ಆಡಳಿತ ಹೊಸ ಸ್ವರೂಪ ಪಡೆದುಕೊಂಡಿದೆ. ಈವರೆಗೆ ಅಸ್ತಿತ್ವದಲ್ಲಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರದಿಂದ (ಸೆ.2) ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ಐದು ನಗರಪಾಲಿಕೆಗಳು ಪ್ರತ್ಯೇಕವಾಗಿ ಆಡಳಿತ ನಡೆಸಲಿದೆ.

ಜಾಗತಿಕ ಮಟ್ಟದ ಮೂಲಸೌಕರ್ಯ ಕಲ್ಪಿಸುವ ರಾಜ್ಯ ಸರ್ಕಾರದ ಆಶಯದಂತೆ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಜಿಬಿಎ ರೂಪಗೊಂಡಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಐದೂ ಪಾಲಿಕೆಗಳು ಬೆಂಗಳೂರು ಹೆಸರನ್ನು ಒಳಗೊಂಡಿದ್ದು, ಉತ್ತರ ನಗರ ಪಾಲಿಕೆ, ದಕ್ಷಿಣ ನಗರ ಪಾಲಿಕೆ, ಪೂರ್ವ ನಗರ ಪಾಲಿಕೆ, ಪಶ್ಚಿಮ ನಗರ ಪಾಲಿಕೆ ಹಾಗೂ ಕೇಂದ್ರ ನಗರ ಪಾಲಿಕೆಗಳಾಗಿ ಕಾರ್ಯನಿರ್ವಹಿಸಲಿವೆ. ಐದೂ ಪಾಲಿಕೆಗಳು ಆಯುಕ್ತರ ನೇತೃತ್ವದಲ್ಲಿ ಪ್ರತ್ಯೇಕವಾಗಿ ಆಡಳಿತ ನಡೆಸುವುದಿದ್ದರೂ, ಇವೆಲ್ಲವನ್ನೂ ಜಿಬಿಎ ಮುಖ್ಯಸ್ಥರಾಗಿ ಮುಖ್ಯ ಆಯುಕ್ತರು ಮುನ್ನಡೆಸಲಿದ್ದಾರೆ. ಹೊಸ ಕಾರ್ಪೊರೇಷನ್‌ಗಳಿಗೆ ವಾರ್ಡ್ ವಿಂಗಡಣೆ ಆಗದ ಕಾರಣ ಅಲ್ಲಿಯವರೆಗೂ, ಆಯಾ ಪಾಲಿಕೆಗಳಲ್ಲಿ ಹಿಂದಿನ ಬಿಬಿಎಂಪಿ ವಾರ್ಡ್ ಪ್ರದೇಶಗಳಡಿಯಲ್ಲಿಯೇ ಆಡಳಿತ ಮುಂದುವರಿಯಲಿದೆ.

ಸದ್ಯದಲ್ಲೇ ಐದೂ ಪಾಲಿಕೆಗಳ ವಾರ್ಡ್ ವಿಂಗಡಣೆಗೆ ಪ್ರತ್ಯೇಕ ಆಯೋಗ ರಚನೆಯಾಗಲಿದೆ. ಈ ಆಯೋಗವು ರಾಜ್ಯ ಚುನಾವಣಾ ಆಯೋಗದ ಸಹಕಾರ ಪಡೆದು ತನ್ನ ಕಾರ್ಯವನ್ನು ಕೈಗೊಳ್ಳಲಿದೆ. ವಿಂಗಡಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗುತ್ತದೆ. ನಂತರ ಅಂತಿಮ ಅಧಿಸೂಚನೆ ಹೊರಬೀಳಲಿದ್ದು (ಬಹುಶ: ನವೆಂಬರ್‌ನಲ್ಲಿ), ಚುನಾವಣೆ 2026ರ ಫೆಬ್ರವರಿ ತಿಂಗಳೊಳಗೆ ನಡೆಯುವ ಸಾಧ್ಯತೆ ಇದೆ. ಆ ಬಳಿಕವೇ ಐದೂ ಪಾಲಿಕೆಗಳಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯ.

ತೆರೆಮರೆಗೆ ಸರಿದ ಏಕ ಪಾಲಿಕೆ ವ್ಯವಸ್ಥೆ:

ಬೆಂಗಳೂರು ನಗರವು ಬ್ರಿಟಿಷ್ ಆಳ್ವಿಕೆಯಲ್ಲೇ ನಗರ ಆಡಳಿತವನ್ನು ಕಂಡಿದೆ. 1881ರಲ್ಲಿ ಮೊದಲ ಬಾರಿಗೆ ಸ್ಥಳೀಯ ನಗರ ಆಡಳಿತವು ಅಸ್ತಿತ್ವಕ್ಕೆ ಬಂದಿತು. ಆ ಸಮಯದಲ್ಲಿ ಕಂಟೋನ್ಮೆಂಟ್ (ದಂಡು ಪ್ರದೇಶ) ಬ್ರಿಟೀಷರ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಇದರ ಆಚೆಯ ಪ್ರದೇಶವು ಬೆಂಗಳೂರು ಪುರಸಭೆ ಸ್ವರೂಪದಲ್ಲಿ ಕಾರ್ಯನಿರ್ವಹಿಸಿತ್ತು. ಸ್ವಾತಂತ್ರ್ಯಾ ನಂತರ 1949ರಲ್ಲಿ ಈ ಎರಡೂ ಪುರಸಭೆಗಳನ್ನು ಒಟ್ಟುಗೂಡಿಸಿ ನಗರಪಾಲಿಕೆಯನ್ನಾಗಿ ರಚಿಸಲಾಯಿತು. ಅಲ್ಲಿಂದ ಈವರೆಗೂ ಏಕಪಾಲಿಕೆ ಸ್ವರೂಪದಲ್ಲೇ ಆಡಳಿತವನ್ನು ಕಂಡಿರುವ ಬೆಂಗಳೂರು, ಈಗ ಕಾಸ್ಮೋಪಾಲಿಟನ್ ನಗರವಾಗಿ ಐದು ಕಾರ್ಪೊರೇಷನ್ ವ್ಯವಸ್ಥೆಗೆ ತೆರೆದುಕೊಂಡಿದೆ.

ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬೆಂಗಳೂರು ನಿಮಾತೃ ನಾಡಪ್ರಭು ಕೆಂಪೇಗೌಡರ ಕನಸಿನಂತೆ ನಗರವು ಒಂದೇ ಆಡಳಿತ ವ್ಯವಸ್ಥೆಯನ್ನು ಒಳಗೊಂಡಿರಬೇಕು ಎಂದು ಪ್ರತಿಪಾದಿಸಿವೆ. ಆಡಳಿತ ಕಠಿಣವಾದಲ್ಲಿ ಹೆಚ್ಚಿನ ಸಂಖ್ಯೆಯ ವಲಯಗಳನ್ನು ರಚಿಸಿ ಅವುಗಳ ಮೂಲಕ ಆಡಳಿತ ವಿಕೇಂದ್ರೀಕರಣಕ್ಕೆ ಅವಕಾಶ ಕಲ್ಪಿಸುವುದು ಯುಕ್ತ ಎಂಬ ಸಲಹೆಯನ್ನು ಮುಂದಿಟ್ಟಿತ್ತು. ಈ ಪ್ರಸ್ತಾಪಕ್ಕೆ ಸರ್ಕಾರ ಮಣೆ ಹಾಕದೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ಒಪ್ಪಿಗೆ ಪಡೆದು ಬಿಬಿಎಂಪಿ ವಿಭಜನೆ ಕಾರ್ಯ ಕೈಗೊಂಡಿತು. ಇದನ್ನೂ ಬಿಜೆಪಿ ವಿರೋಧಿಸಿದ್ದರಿಂದಲೇ ಹಾಲಿ 5 ಪಾಲಿಕೆ ರಚನೆಯ ಕರಡು ಅಧಿಸೂಚನೆಗೆ ಆಕ್ಷೇಪಣೆಯನ್ನೇ ಸಲ್ಲಿಸಿಲ್ಲ. ತಾನು ಮತ್ತೆ ಅಧಿಕಾರಕ್ಕೆ ಬಂದಲ್ಲಿ ಒಂದೇ ಪಾಲಿಕೆಯನ್ನಾಗಿಸುವ ಸಂದೇಶ ರವಾನಿಸಿದೆ. ಜತೆಗೆ ಜಿಬಿಎ ರಚನೆ ಸಾಂವಿಧಾನಿಕವಾಗಿ ರಚಿಸಿಲ್ಲ ಎಂದು ಆಕ್ಷೇಪಿಸಿ ನ್ಯಾಯಾಲಯದ ಕದ ತಟ್ಟಲು ಮುಂದಾಗಿದೆ.

ಪಾಲಿಕೆಯಲ್ಲಿ 53 ಮಂದಿ ಮೇಯರ್‌ಗಿರಿ:

1949ರಲ್ಲಿ ಮೊದಲ ಬಾರಿಗೆ ನಗರಪಾಲಿಕೆ ಆಡಳಿತ ಕಂಡಿರುವ ಬೆಂಗಳೂರು ನಗರವು ಈವರೆಗೆ 53 ಮೇಯರ್‌ಗಳನ್ನು ಕಂಡಿದೆ. ಪ್ರಥಮ ಮಹಾಪೌರ ಖ್ಯಾತಿಯು ಸ್ವಾತಂತ್ರ್ಯ ಹೋರಾಟಗಾರ ಆರ್.ಸುಬ್ಬಣಗೆ ಸಂದಿದೆ. 1949ರಿಂದ 1995ರವರೆಗೆ 33 ಮೇಯರ್ ಕಾರ್ಯನಿರ್ವಹಿಸಿದ್ದು, ಈ ಮಧ್ಯೆ ಮೂರು ಅವಧಿಯಲ್ಲಿ ಆಡಳಿತಗಾರರನ್ನು (1967-70, 1975-83, 1989-90) ಪಾಲಿಕೆ ಕಂಡಿತ್ತು. 1995ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಆಗಿ ಮೇಲ್ದರ್ಜೆಗೇರಿ 1996ರಲ್ಲಿ 87 ವಾರ್ಡ್‌ಗಳಿಗೆ ಚುನಾವಣೆ ನಡೆಯಿತು. ಈ ವ್ಯವಸ್ಥೆ 2006ರ ವರೆಗೂ ಮುಂದುವರಿದು 10 ಮೇಯರ್‌ಗಳನ್ನು ಕಂಡಿತು. 2007ರಲ್ಲಿ ಬಿಬಿಎಂಪಿ ರಚನೆಗೊಂಡು 2008ರಲ್ಲಿ ಮೊದಲ ಚುನಾವಣೆ ಕಂಡು 2020ರವರೆಗೂ ಮುಂದುವರಿದು ಹತ್ತು ಮೇಯರ್‌ಗಳು ಆಡಳಿತ ನಡೆಸಿದರು.

ಯೌವ್ವನಾವಸ್ಥೆಯಲ್ಲೇ ಕಮರಿದ ಬಿಬಿಎಂಪಿ !

ದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ 10 ಮಹಾನಗರಗಳಲ್ಲಿ ಬೆಂಗಳೂರು ಒಂದೆನಿಸಿದೆ. ಈ ಕಾರಣದಿಂದ 2007ರಲ್ಲಿ ಬಿಎಂಪಿಗೆ ನಗರದ ಸುತ್ತಲಿನ 7 ನಗರಸಭೆ, 1 ಪುರಸಭೆ ಹಾಗೂ 110 ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ರಚಿಸಲಾಯಿತು. 2008ರಿಂದ 2020ರವರೆಗೆ ಎರಡು ಬಾರಿಯಷ್ಟೇ ಚುನಾವಣೆ ನಡೆಯಿತು. ಬರೋಬರಿ 18 ವರ್ಷದಲ್ಲೆ ಬಿಬಿಎಂಪಿ ತೆರೆಮರೆಗೆ ಸಂದಿದೆ. ಬಿಬಿಎಂಪಿಯಗೆ ಇನ್ನಷ್ಟು ಬಲ ನೀಡಲು ನಿಕಟಪೂರ್ವ ಬಿಜೆಪಿ ಸರ್ಕಾರದಲ್ಲಿ ಕಸರತ್ತು ನಡೆದರೂ ಪೂರ್ಣವಾಗಿ ಜಾರಿಗೆ ಬಂದಿಲ್ಲ. ಎರಡು ವರ್ಷದ ಹಿಂದೆ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ವಿಭಜಿಸಿ ಐದು ಪಾಲಿಕೆಗಳನ್ನು ರಚಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ತೆಕ್ಕೆಗೆ ಮಹಾನಗರವನ್ನು ಒಳಪಡಿಸಿದೆ.

ಮಂಗಳವಾರದಿಂದ (ಸೆ.2) ಐದು ಪಾಲಿಕೆಗಳ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಅಗತ್ಯ ಸಿದ್ಧತೆ ಮಾಡಿದ್ದು, ಜನರಿಗೆ ಉತ್ತಮ ಆಡಳಿತ ನೀಡಲಾಗುವುದು. ಐದೂ ಪಾಲಿಕೆಗಳಲ್ಲಿ ಹೊಸದಾಗಿ ವಾರ್ಡ್‌ಗಳನ್ನು ರಚಿಸುವವರೆಗೂ ಹಿಂದಿನ ಬಿಬಿಎಂಪಿ ವಾರ್ಡ್‌ಗಳಡಿ ಪಾಲಿಕೆಗಳು ಕಾರ್ಯನಿರ್ವಹಿಸಲಿವೆ.

- ಎಂ.ಮಹೇಶ್ವರ್ ರಾವ್, ಜಿಬಿಎ ಮುಖ್ಯ ಆಯುಕ್ತ