ಬೆಂಗಳೂರು: ರಾಜಧಾನಿಯಲ್ಲಿ ಬೀದಿ ನಾಯಿ ಕಡಿತ ಪ್ರಕರಣ ತಗ್ಗಿಸಲು ಬಿಬಿಎಂಪಿ ಮಾರ್ಗಸೂಚಿ ಹೊರಡಿಸಿದೆ.
ಸಾರ್ವಜನಿಕರ ಸ್ಥಳಗಳಲ್ಲಿ ಓಡಾಡುವಾಗ ನಾಯಿ ಕಂಡರೆ ತೊಂದರೆ ನೀಡಬಾರದು. ಯಾವುದೇ ರೀತಿ ಪ್ರಚೋದನೆ, ಕಿರಿಕಿರಿ ಮಾಡಬಾರದು. ಇವುಗಳಿಗೆ ತೊಂದರೆ ಕೊಟ್ಟರೆ ಮಾತ್ರ ನಮ್ಮ ಮೇಲೆ ದಾಳಿ ಮಾಡುತ್ತವೆ. ಹೀಗಾಗಿ, ಬೀದಿ ಅಥವಾ ಸಾಕು ನಾಯಿ ಕಂಡಾಗ ತೊಂದರೆ ನೀಡದೆ ದೂರದಿಂದ ತೆರಳಬೇಕು. ಅನಾರೋಗ್ಯದಿಂದ ಇರುವ ನಾಯಿಗಳಿಂದ ದೂರ ಇರಬೇಕು. ಕಚ್ಚಿದರೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಕಚ್ಚುವ ನಾಯಿಗಳು ತೀಕ್ಷ್ಣ ನೋಟ, ಬಿದ್ದ ದವಡೆ ಹೊಂದಿರುತ್ತವೆ. ಇವುಗಳ ಮೇಲೆ ದಾಳಿಗೆ ಮುಂದಾಗಬಾರದು. ಕಚ್ಚಿದರೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕೆಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ರಾತ್ರಿ ವೇಳೆ ಬೀದಿ ನಾಯಿಗಳು ಎಗರಿ ಬೀಳುತ್ತಿರುವುದು, ಶಾಲೆಗೆ ತೆರಳುವ ಸಂದರ್ಭದಲ್ಲಿ ಮಕ್ಕಳ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ಆಗಾಗ್ಗೆ ಮರುಕಳುಹಿಸುತ್ತಲ್ಲೇ ಇದೆ. ಹೀಗಾಗಿ, ನಾಯಿಗಳ ಕಡಿತಕ್ಕೆ ಕಾರಣವೇನು? ಇವುಗಳಿಂದ ಸುರಕ್ಷಿತವಾಗಿರಲು ಏನು ಮಾಡಬೇಕು? ನಾಯಿಗಳಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಶಾಲಾ ಮಕ್ಕಳಿಗೆ, ಜನರಿಗೆ ಜಾಗೃತಿ ಮೂಡಿಸಲು ಪಾಲಿಕೆ ಮುಂದಾಗಿದೆ.
ಮೂರು ವರ್ಷಗಳಿಂದ ರೇಬಿಸ್ ಲಸಿಕೆ ಪರಿಣಾಮದಿಂದ ನಾಯಿಗಳ ಕಡಿತದ ಪ್ರಮಾಣ ಕುಸಿದಿದೆ. 2019-20ರಲ್ಲಿ 42,818, ಜನರಿಗೆ ಕಚ್ಚಿದರೆ, 2020-21ರಲ್ಲಿ 18,629 ಮತ್ತು 2021-22ರಲ್ಲಿ 17,610 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿವೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.