ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತುದಾರರು ಹೆಚ್ಚು ಆಸ್ತಿ ತೆರಿಗೆ ಉಳಿಸಿಕೊಂಡಿರುವವರಿಗೆ ಬಿಸಿ ಮುಟ್ಟಿಸಿರುವ ಪಾಲಿಕೆ ಅಧಿಕಾರಿಗಳು, ಅಧಿಕ ಮೊತ್ತದ ಬಾಕಿ ಪಾವತಿಸಲು ವಿಲವಾಗಿರುವ ಸ್ವತ್ತುಗಳಿಗೆ ಬುಧವಾರ ಬೀಗಮುದ್ರೆ ಹಾಕಿದ್ದಾರೆ.
ಕಳೆದೆರಡು ದಿನಗಳಿಂದ ವಿವಿಧ ವಲಯಗಳಲ್ಲಿ ಒಟ್ಟು 115 ಆಸ್ತಿಗಳಿಗೆ ಬೀಗ ಹಾಕಲಾಗಿದೆ. ಈ ಪೈಕಿ ಪೂರ್ವ ಹಾಗೂ ಪಶ್ಚಿಮ ವಲಯದಲ್ಲಿ ಕ್ರಮವಾಗಿ 32 ಹಾಗೂ 30 ಸ್ವತ್ತುಗಳಿಗೆ ಕಂದಾಯ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ಇವುಗಳಲ್ಲಿ ವಸತಿಯೇತರ ಆಸ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
ಪೂರ್ವ ವಲಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬರುವ ಮಿಟ್ಟಲ್ ಟವರ್ಸ್‌ನಲ್ಲಿ ಬುಧವಾರ ಬಾಕಿ ಆಸ್ತಿ ತೆರಿಗೆ ಪಾವತಿಸದ ಗೋಯಲ್ ಸ್ವತ್ತಿಗೆ ಭೇಟಿ ನೀಡಿ ಬೀಗ ಮುದ್ರೆ ಹಾಕಲು ಮುಂದಾದಾಗ, ಆಸ್ತಿ ಮಾಲೀಕರು ಬಾಕಿಯಿದ್ದ 17.42 ಲಕ್ಷ ರೂ. ತೆರಿಗೆಯನ್ನು ತಕ್ಷಣವೇ ಪಾವತಿಸಿದ್ದಾರೆ.
ಪೂರ್ವ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ವಿಭಾಗವಾರು ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಸಾಕಷ್ಟು ಸಮಯಾವಕಾಶವನ್ನು ನೀಡಿದ್ದರೂ ಕೂಡಾ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕಾರಣ ವಾಣಿಜ್ಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಬೀಗ ಮುದ್ರೆ ಹಾಕಲಾಗುತ್ತಿದೆ ಎಂದು ವಲಯ ಆಯುಕ್ತೆ ಸ್ನೇಹಲ್ ತಿಳಿಸಿದ್ದಾರೆ.
ಡಿ.1ರಿಂದ ತೆರಿಗೆ ದ್ವಿಗುಣ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ. ತೆರಿಗೆ ಬಾಕಿಯಿರುವ ನಾಗರಿಕರು ನ.30ರೊಳಗೆ ಪಾವತಿಸಬೇಕು. ಇಲ್ಲದಿದ್ದಲ್ಲಿ ಡಿ.1ರಿಂದ ಬಾಕಿ ಆಸ್ತಿ ತೆರಿಗೆಯು ದ್ವಿಗುಣಕ್ಕಿಂತ ಹೆಚ್ಚಾಗುತ್ತದೆ. ಹಾಗಾಗಿ ಬಾಕಿ ಆಸ್ತಿ ತೆರಿಗೆಯನ್ನು ಶೀಘ್ರವಾಗಿ ಪಾವತಿ ಮಾಡುವಂತೆ ಪಾಲಿಕೆ ವಿನಂತಿಸಿದೆ.