ಜಿಲ್ಲೆ

ಗಾಯಾಳುಗಳಿಗೆ ಮುಂದುವರಿದ ವಿಶೇಷ ಚಿಕಿತ್ಸೆ: ಸಚಿವ ದಿನೇಶ್ ಗುಂಡೂರಾವ್ ಭೇಟಿ

ಹರೀಶ್​​ ಕೆ.ಸಿ.

ಬೆಂಗಳೂರು: ಪಾಲಿಕೆ ಕೇಂದ್ರ ಕಚೇರಿ ಆವರಣದ ‘ಗುಣ ನಿಯಂತ್ರಣ ಪ್ರಯೋಗಾಲಯದ ಕಚೇರಿಯಲ್ಲಿ ಶನಿವಾರ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ 9 ಮಂದಿ ಪೈಕಿ ಇಬ್ಬರ ಸ್ಥಿತಿ ತುಸು ಗಂಭೀರವಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ ವಿಭಾಗದಲ್ಲಿ ಗಾಯಾಳುಗಳಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ಮೇಲೆ ವೈದ್ಯರ ನಿಗಾ ಇಟ್ಟಿದ್ದಾರೆ. ಜತೆಗೆ, ಗಂಭೀರವಾಗಿ ಸುಟ್ಟು ಗಾಯಗೊಂಡಿರುವ ಇಬ್ಬರಿಗೆ ವಿಶೇಷ ತಜ್ಞರಿಂದ ಚಿಕಿತ್ಸೆ ಒದಗಿಸಲಾಗುತ್ತಿದೆ. ವಿಷಯ ತಿಳಿದು ದೂರದ ಊರಿಂದ ಬಂದಿರುವ ಸಂಬಂಧಿಕರಿಗೆ ತಮ್ಮವರನ್ನು ನೋಡುವುದಕ್ಕೆ ಅವಕಾಶ ಸಿಗದೆ ಪರದಾಡುವಂತಾಗಿದೆ. ಭದ್ರತಾ ಸಿಬ್ಬಂದಿ ಒಳಗಡೆ ಬಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂಭಾಗ ಸಂಬಂಧಿಕರು ಗೋಳಾಡುತ್ತಿರುವ ದೃಶ್ಯ ಕಂಡುಬಂತು.

ಕಾರ್ಯಪಾಲಕ ಅಭಿಯಂತರರಾದ ಕಿರಣ್, ಸಂತೋಷ್ ಕುಮಾರ್, ವಿಜಯಮಾಲ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್, ಗಣಕಯಂತ್ರ ನಿರ್ವಾಹಕ ಮನೋಜ್, ಪ್ರಥಮ ದರ್ಜೆ ಸಹಾಯಕ ಸಿರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್ ಎಂಬುವರು ತುಸು ಚೇತರಿಕೊಳ್ಳುತ್ತಿದ್ದಾರೆ. ಆದರೆ, ಮುಖ್ಯ ಅಭಿಯಂತರ ಶಿವಕುಮಾರ್, ಆಪರೇಟರ್ ಜ್ಯೋತಿ ಆರೋಗ್ಯ ಸ್ಥಿತಿ ತುಸು ಗಂಭೀರವಾದರೂ ಅದೃಷ್ಟವಶಾತ್ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ. ಎಲ್ಲ ರೋಗಿಗಳಿಗೆ ಡಯಾಲಿಸೀಸ್ ಸೇರಿ ಇತರ ವೈದ್ಯಕೀಯ ಪರೀಕ್ಷೆ ಸೇರಿ ಇತರೆ ಚಿಕಿತ್ಸೆ ಕೊಡಲಾಗುತ್ತಿದೆ. ಶನಿವಾರ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಎಂಎಲ್ಸಿ ರವಿ ಕುಮಾರ್ ಹಾಗೂ ಎಎಪಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದರು.

ದಿನೇಶ್ ಗುಂಡೂರಾವ್ ಮಾತನಾಡಿ, ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ 9 ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಯಾರ ಜೀವಕ್ಕೂ ತೊಂದರೆಯಿಲ್ಲ. ಗುಣಮುಖವಾಗಲು ಸ್ವಲ್ಪ ಸಮಯ ಬೇಕಾಗಲಿದೆ. ಗಾಯಾಳುಗಳು ನನ್ನ ಜತೆ ಮಾತನಾಡಿದ್ದಾರೆ. ವಿಶೇಷ ಆರೈಕೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ. ಇಂಥ ಘಟನೆಗಳು ನಡೆಯದಂತೆ ಸುರಕ್ಷತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಪ್ರಕರಣ ಸಂಬಂಧ ತನಿಖೆಯಾಗುತ್ತಿದೆ. ಸರ್ಕಾರದಿಂದ ಚಿಕಿತ್ಸೆ ವೆಚ್ಚ ಭರಿಸಲಾಗುವುದು ಎಂದರು. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲು ಆಂಬುಲೆನ್ಸ್ ತಡವಾಗಿ ಆಗಮಿಸಿರುವ ಬಗ್ಗೆ ಮಾಧ್ಯಮದವರು ಕೇಳಿದ್ದ ಪ್ರಶ್ನೆಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕರೆ ಮಾಡಿದ ತಕ್ಷಣ ಅದಷ್ಟೂ ಬೇಗ ಸ್ಥಳಕ್ಕೆ ಆಂಬುಲೆನ್ಸ್ ತೆರಳಬೇಕು. ಒಂದು ವೇಳೆ ನಿರ್ಲಕ್ಷ್ಯ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಇದರ ಬಗ್ಗೆಯೂ ತನಿಖೆಯಾಗುತ್ತಿದೆ ಎಂದರು.

ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಅವಘಡ ನಡೆದಿರುವ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರ ಆನಂದ್ ಎಳೆಎಳೆಯಾಗಿ ಬಿಚ್ಚಿಟ್ಟರು. ‘ಬಸವನಗುಡಿ ಭಾಗದ ಕಾಮಗಾರಿ ಸಂಬಂಧಪಟ್ಟಂತೆ ಕ್ವಾಲಿಟಿ ಪರೀಕ್ಷೆ ಮಾಡುತ್ತಿದ್ದವು. ಟಾರ್‌ನಲ್ಲಿರುವ ಬಿಟಮಿನ್ ಅಂಶವನ್ನು ಪ್ರತಿನಿತ್ಯ ಪರೀಕ್ಷಿಸುತ್ತಿದ್ದ ಸ್ಥಳದಲ್ಲೇ ಇದನ್ನು ಮಾಡುತ್ತಿದ್ದವು. ಕಳೆದ ವರ್ಷದಿಂದ ‘ಡಿ’ ಗ್ರೂಪ್ ನೌಕರ ಸುರೇಶ್ ಪರೀಕ್ಷೆ ಮಾಡುತ್ತಿದ್ದರು.ಅವರಿಗೆ ತರಬೇತಿ ನೀಡಲಾಗಿತ್ತು.ಪರೀಕ್ಷೆ ಮಾಡುವ ವೇಳೆ ಬಿನ್ಸಿನ್ ಹಾಕಿ ಸ್ವಚ್ಛ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ’. ಎಂದರು. ಆಯತಪ್ಪಿ ಬಿನ್ಸಿನ್ ಕೆಳಗೆ ಬಿತ್ತು, ಕೆಳಗೆ ಇಟ್ಟಿದ್ದ ಕ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಪಕ್ಕದಲ್ಲೆ ಬಿನ್ಸಿನ್ ಕೆಮಿಕಲ್ ತುಂಬಿದ ಎರಡು ಕ್ಯಾನ್‌ಗಳಿತ್ತು. ಕೆಲ ಸೆಕೆಂಡ್‌ನಲ್ಲಿ ಇವುಗಳಿಗೆ ಬೆಂಕಿ ತಗುಲಿ ಜೋರಾಗಿ ಊರಿಯುತ್ತಿತ್ತು. ಬೆಂಕಿ ಕೆನ್ನಾಲಿಗೆ ಕ್ಯಾನ್ ಓಪನ್ ಆಗಿ ಜಿನುಗುತ್ತಿತ್ತು. ಈ ಘಟನೆ ನಡೆದ ತಕ್ಷಣವೇ ಕಟ್ಟಡಕ್ಕೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದೆ. ಶಾರ್ಟ್ ಸರ್ಕ್ಯೂಟ್ ಆಗದಂತೆ ಮುಂಜಾಗ್ರತಾವಾಗಿ ಎಂಸಿಬಿ ಸ್ವಿಚ್ ಆ್ ಮಾಡಿದೆ. ಕೆಳಭಾಗದಲ್ಲಿ ಇದ್ದಿದ್ದರಿಂದ ನನಗೆ ಏನು ಆಗಲಿಲ್ಲ. ಧಗಧಗನೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಚೇರಿ ಮೇಲ್ಭಾಗದಲ್ಲಿ ಇದ್ದವರು ಹೊರಗೆ ಬಾರಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರಿಗೆ ಹೆಚ್ಚಿನ ಗಾಯವಾಗಿದೆ. ಕೇವಲ ಎರಡು ನಿಮಿಷದಲ್ಲಿ ಘಟನೆ ನಡೆಯಿತು. ನಮ್ಮ ಕೈತಪ್ಪಿನಿಂದ ಈ ತೊಂದರೆ ಆಗಿರುವ ಬಗ್ಗೆ ತುಂಬ ದುಃಖ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಘಟನೆ ನಡೆದಿದ್ದು ಹೇಗೆ?

ವಿಚಾರಣೆಗೆ ಆದೇಶ: ಬೆಂಕಿ ಅವಘಡ ಬಗ್ಗೆ ಆಂತರಿಕ ತಾಂತ್ರಿಕ ವಿಚಾರಣೆ ನಡೆಸಲು ಪಾಲಿಕೆ ಮುಖ್ಯ ಇಂಜಿನಿಯರ್ ಬಿ.ಎಸ್.ಪ್ರಲ್ಹಾದ್ ಅವರನ್ನು ನೇಮಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ. ಆ.31ರೊಳಗೆ ವಿಚಾರಣೆ ವರದಿ ನೀಡುವಂತೆ ಸೂಚಿಸಿದ್ದಾರೆ.

ಖಂಡನೆ: ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದಿರುವ ಬೆಂಕಿ ಅವಘಡ ಸಂಬಂಧ ಮೂವರು ನೌಕರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಖಂಡಿಸಿದೆ. ಆಕಸ್ಮಿಕವಾಗಿ ಘಟನೆ ನಡೆದಿದೆ. ಇದರಲ್ಲಿ ಬಿಬಿಎಂಪಿ ಅಧಿಕಾರಿಗಳು,ನೌಕರರ ಕೈವಾಡವಿಲ್ಲದರೂ ಎಫ್ಐಆರ್ ದಾಖಲಿಸಿರುವುದು ಸರಿಯಲ್ಲ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಸಚಿವ

ಗಾಯಾಳುಗಳ ಸ್ಥಿತಿ ತುಸು ಸುಧಾರಿಸುತ್ತಿದೆ. ವೈದ್ಯರು ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಈ ಘಟನೆ ನಡೆಯಬಾರದಿತ್ತು. ಸುರಕ್ಷತಾ ಕಟ್ಟಡ ಇರಬೇಕೆಂದು ಹೇಳುವ ಪಾಲಿಕೆಯಲ್ಲೇ ಇಂಥ ಘಟನೆ ನಡೆದಿದೆ. ಕಚೇರಿಗಳಲ್ಲಿ ಸುರಕ್ಷತಾ ನಿಯಮ ಅಳವಡಿಸಬೇಕು. ಇದರ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ಇಂಥ ಘಟನೆಗಳು ಮರುಕಳಿಸಬಾರದು.

ಕೋಟ್: