ಜಿಲ್ಲೆ

ಬಿಬಿಎಂಪಿಯಿಂದ ರಸ್ತೆಗುಂಡಿ ಮುಚ್ಚವ ಕಾರ್ಯಕ್ಕೆ ಚುರುಕು

ಆರ್.ತುಳಸಿಕುಮಾರ್

ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವಲ್ಲಿ ವಿಫಲವಾಗುವ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂಬ ಡಿಸಿಎಂ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಸೋಮವಾರ ಪಾಲಿಕೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ಎಲ್ಲ ವಲಯಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲ ಎಂಟೂ ವಲಯಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ. ಕೆಲ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಡಾಂಬರು ಹಾಕುವ ಕಾರ್ಯದ ಮೇಲ್ವಿಚಾರಣೆ ನಡೆಸಿದರು. ಗಡುವಿನೊಳಗೆ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವುದಾಗಿಯೂ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ಕುರಿತು ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಮಾತನಾಡಿ, ನಗರದಾದ್ಯಂತ ರಸ್ತೆಗುಂಡಿಗಳನ್ನು ಯುದ್ದೋಪಾದಿಯಲ್ಲಿ ಮುಚ್ಚಲಾಗುತ್ತಿದೆ. ಶಿವಾಜಿನಗರ ವ್ಯಾಪ್ತಿಯ ತಿಮ್ಮಯ್ಯ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯವಾಗಿದೆ. ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳು ರಸ್ತೆಗಿಳಿದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ವರ್ಷದಲ್ಲಿ 2,390 ರಸ್ತೆಗುಂಡಿ ದುರಸ್ತಿ:

ಪೂರ್ವ ವಲಯ ವ್ಯಾಪ್ತಿಯಲ್ಲಿ 258.59 ಕಿ.ಮೀ. ಉದ್ದದಷ್ಟು ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿವೆ. 1,394 ಕಿ.ಮೀ. ಉದ್ದದ ವಾರ್ಡ್ ರಸ್ತೆಗಳು ಸೇರಿ ಒಟ್ಟು 1,652.59 ಕಿ.ಮೀ. ರಸ್ತೆಗಳಿವೆ. ಕಳೆದೊಂದು ವರ್ಷದಲ್ಲಿ 2,390 ರಸ್ತೆಗುಂಡಿಗಳು ಮುಚ್ಚಲಾಗಿದ್ದು, ರಸ್ತೆಗುಂಡಿ ‘ಗಮನ’ ತಂತ್ರಾಂಶದಲ್ಲಿ ಬರುತ್ತಿರುವ ದೂರುಗಳನ್ನು ಆಧರಿಸಿ ಕಾಲಮಿತಿಯೊಳಗಾಗಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ವೇಳೆ ಮುಖ್ಯ ಅಭಿಯಂತರ ಸುಗುಣಾ, ಕಾರ್ಯಪಾಲಕ ಅಭಿಯಂತರ ಸೈಫುದ್ದೀನ್ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾದಚಾರಿ ಒತ್ತುವರಿ ತೆರವಿಗೆ ಕ್ರಮ:

ರಸ್ತೆಗುಂಡಿ ಮುಚ್ಚು ಕಾರ್ಯ ಪರಿಶೀಲನೆಯ ನಂತರ ತಿಮ್ಮಯ್ಯ ರಸ್ತೆ, ನ್ಯೂ ಮಾರ್ಕೆಟ್ ರಸ್ತೆ ಸೇರಿ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿದ ಸ್ನೇಹಲ್ ಅವರು, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವವರಿಗೆ ಕೂಡಲೆ ತೆರವುಗೊಳಿಸಿ ಮತ್ತೆ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಿದರು.