ಆರ್.ತುಳಸಿಕುಮಾರ್
ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚಿನ ಆಯವ್ಯಯ ಮಂಡಿಸಿ ಗಮನ ಸೆಳೆದಿರುವ ಬಿಬಿಎಂಪಿ, ಈಗ ಸಂಪನ್ಮೂಲ ಸಂಗ್ರಹಿಸಲು ಭಾರಿ ಸವಾಲು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಚುನಾಯಿತ ಆಡಳಿತ ಇಲ್ಲದೆ ಸತತ 5ನೇ ಬಾರಿಗೆ ಅಧಿಕಾರಿಗಳು ಮಂಡಿಸಿರುವ ಬಜೆಟ್‌ನಲ್ಲಿ ಕೆಲವೊಂದು ದೂರಾಲೋಚನೆಯ ಯೋಜನೆಗಳಿದ್ದರೂ, ಸಾರ್ವಜನಿಕರು ಒಪ್ಪಿಕೊಳ್ಳುವಂತಹ ಕಾರ್ಯಕ್ರಮಗಳು ಅತ್ಯಲ್ಪ. ಮುಖ್ಯವಾಗಿ ಜನರಿಗೆ ನೇರವಾಗಿ ತಲುಪುವ ಸೌಲಭ್ಯಗಳಿಗೆ ಬಜೆಟ್‌ನಲ್ಲಿ ಸ್ಥಾನ ಸಿಕ್ಕಿಲ್ಲ ಎಂಬ ಕೂಗು ಎದ್ದಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಲಿಕೆ ತನ್ನ ಖರ್ಚು-ವೆಚ್ಚಗಳನ್ನು ಭರಿಸಲು ಯಾವ ರೀತಿಯಲ್ಲಿ ಆದಾಯ ಕ್ರೋಡೀಕರಿಸಲಿದೆ ಎಂಬ ಪ್ರಶ್ನೆ ಎದ್ದಿದೆ.
2025-26ನೇ ಸಾಲಿಗೆ ಪಾಲಿಕೆಯು 19,930.64 ಕೋಟಿ ರೂ. ಮೊತ್ತದ ಆಯವ್ಯಯ ಮಂಡಿಸಲಾಗಿದೆ. ಇದಕ್ಕೆ ಪ್ರತಿಯಾಗಿ 11,151.70 ಕೋಟಿ ರೂ. ಸ್ವಂತ ಸಂಪನ್ಮೂಲದ ಆದಾಯ ಸಿಗುವ ಇಂಗಿತ ವ್ಯಕ್ತಪಡಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ 8,778.94 ಕೋಟಿ ರೂ. ಸಿಗುವುದರಿಂದ ಆದಾಯ-ವೆಚ್ಚವು ಸರಿದೂಗುವ ನಿರೀಕ್ಷೆ ಅಧಿಕಾರಿಗಳದ್ದಾಗಿದೆ. ಮುಖ್ಯವಾಗಿ ಈ ಬಾರಿ ಆಸ್ತಿತೆರಿಗೆ ಬಾಬ್ತಿನಿಂದ 5,761 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಪ್ರೀಮಿಯಂ ಎಫ್ಎಆರ್ ಶುಲ್ಕ ರೂಪದಲ್ಲಿ 2,000 ಕೋಟಿ ರೂ. ಹಾಗೂ ನಗರ ಯೋಜನೆ ವಿಭಾಗದಿಂದ 805 ಕೋಟಿ ರೂ. ಆದಾಯ ಸಿಗುವ ಲೆಕ್ಕಾಚಾರ ಮಾಡಲಾಗಿದೆ. ಆದರೆ, ಈ ಬಾರಿ ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಇರದ ಕಾರಣ 1,280 ಕೋಟಿ ರೂ. ಕಡಿಮೆಯಾಗಲಿದೆ. ಇದನ್ನು ಇತರ ಮೂಲಗಳಿಂದ ಭರಿಸಿಕೊಳ್ಳಲಾಗುವುದು ಎಂಬುದಾಗಿ ಹೇಳುತ್ತಿದ್ದರೂ, ಅಂತಹ ಆಶಾಕಿರಣ ಕಾಣುತ್ತಿಲ್ಲ.
ಒಟಿಎಸ್‌ಗೆ ಪರ್ಯಾಯ ಮೂಲ ಏನಿದೆ?:
2024-25ನೇ ಸಾಲಿನಲ್ಲಿ 12,369.50 ಕೋಟಿ ರೂ. ಬಜೆಟ್ ಮಂಡಿಸಲಾಗಿತ್ತು. ಇದಕ್ಕೆ ಅನುಮೋದನೆ ನೀಡುವ ವೇಳೆ ಸರ್ಕಾರ 750 ಕೋಟಿ ರೂ. ಹೆಚ್ಚುವರಿ ಸೇರಿಸಿದ್ದರಿಂದ ಆಯವ್ಯಯ ಗಾತ್ರ 13,114 ಕೋಟಿ ರೂ.ಗೆ ಹಿಗ್ಗಿತ್ತು. ಆದಾಯ ಬಾಬ್ತಿನಲ್ಲಿ ಆಸ್ತಿ ತೆರಿಗೆ ಗುರಿ 5,200 ಕೋಟಿ ರೂ.ಗೆ ಪ್ರತಿಯಾಗಿ 4,800 ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ 1,280 ಕೋಟಿ ರೂ. ಒಟಿಎಸ್‌ನಿಂದ ಬಂದಿದೆ. ಈ ಬಾರಿ ಒಟಿಎಸ್ ಇಲ್ಲದ ಕಾರಣ ಅಷ್ಟೂ ಆದಾಯ ಖೋತಾ ಆಗಲಿದೆ. ಇದಕ್ಕೆ ಪ್ರತಿಯಾಗಿ ಹೆಚ್ಚುವರಿ 6 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಪ್ರಸ್ತಾಪ ಇದ್ದರೂ, ಬೃಹತ್ ಮೊತ್ತ ಸಂಗ್ರಹ ಅನುಮಾನ. ಏಕೆಂದರೆ ಖಾಸಗಿ ಲೇಔಟ್‌ಗಳಲ್ಲಿರುವ ರಸ್ತೆಗಳನ್ನು ಸರ್ಕಾರಿ ರೋಡ್‌ಗಳೆಂದು ಪರಿಗಣಿಸಿ ಅಲ್ಲಿನ ಸ್ವತ್ತುಗಳಿಗೆ ಹೊಸ ಸಂಖ್ಯೆ ನೀಡಿ ತೆರಿಗೆ ಸಂಗ್ರಹ ಒಂದೇ ವರ್ಷದಲ್ಲಿ ಆಗದ ಕೆಲಸ. ಜತೆಗೆ ಎಫ್ಎಆರ್ನಿಂದ 2 ಸಾವಿರ ಕೋಟಿ ರೂ. ನಿರೀಕ್ಷಿಸಿದ್ದರೂ, ಈ ಯೋಜನೆ ಜಾರಿಗೆ ಬಂದರೂ, ಬಿಲ್ಡರ್‌ಗಳು ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಲ್ಲಿ ಒಂದಿಷ್ಟು ಹಣ ಮಾತ್ರ ಬರಬಹುದು. ಹೊಸ ಜಾಹೀರಾತು ನೀತಿಗೆ ಹೈಕೋರ್ಟ್ ತಡೆಯಾಜ್ಞೆ ತೆರವಾದಲ್ಲಿ ಆದಾಯ ಖಾತರಿ. ಇವುಗಳ ಹೊರತು ದೊಡ್ಡ ಮೊತ್ತವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸುವ ದಾರಿ ಪಾಲಿಕೆ ಕಂಡುಕೊಳ್ಳದ ಕಾರಣ ಆದಾಯ ಮೂಲ ವಿಸ್ತರಣೆಯಾಗುತ್ತಿಲ್ಲ ಎಂಬುದು ದಿಟ.
ಸಿಬ್ಬಂದಿ ವೆಚ್ಚ ದುಪ್ಪಟ್ಟು:
ಬಿಬಿಎಂಪಿಯಲ್ಲಿ ವರ್ಷದಿಂದ ವರ್ಷಕ್ಕೆ ಸಿಬ್ಬಂದಿ ವೆಚ್ಚ ಏರುತ್ತಲೇ ಇದೆ. ಹೊಸ ನೇಮಕಾತಿ ಆಗದಿದ್ದರೂ, ಹಾಲಿ ಸಿಬ್ಬಂದಿಗಳ ವೇತನ-ಭತ್ಯೆಗೆ ಅಧಿಕ ಹಣ ಖರ್ಚಾಗುತ್ತಿದೆ. 2019-20ರಲ್ಲಿ 857 ಕೋಟಿ ರೂ. ಖರ್ಚಾಗಿದ್ದರೆ 2025-26ನೇ ಸಾಲಿಗೆ 1,751 ಕೋಟಿ ರೂ. ಖರ್ಚಾಗಲಿದೆ. ಅಂದರೆ, ಆರೇ ವರ್ಷದಲ್ಲಿ ಸಿಬ್ಬಂದಿ ವೆಚ್ಚ ದುಪ್ಪಟ್ಟಾಗಿದೆ. ಆದರೂ, ಸಿಬ್ಬಂದಿಯಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗುತ್ತಿಲ್ಲ ಎಂಬ ಆಕ್ಷೇಪ ಇದೆ. ಕತೆಗೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗದ ಕಾರಣ ಪಾಲಿಕೆಯ ವೆಚ್ಚ ಮಿತಿ ಆದಾಯವನ್ನು ಹಿಂದಿಕ್ಕಿದೆ ಎಂಬ ಅಪವಾದ ಕೇಳಿಬಂದಿದೆ.
ಪಾಲಿಕೆಗೆ 2025-26ರಲ್ಲಿ ಅನುದಾನ ನಿರೀಕ್ಷೆ:
ರಾಜ್ಯ ಸರ್ಕಾರ - 7,000 ಕೋಟಿ ರೂ.
ಕೇಂದ್ರ ಸರ್ಕಾರ - 498 ಕೋಟಿ ರೂ.
ಎಸ್ಎಫ್ಸಿ ನಿಧಿ - 542.43 ಕೋಟಿ ರೂ.
ರಾಷ್ಟ್ರೀಯ ವಿಪತ್ತು ನಿಧಿ - 238.50 ಕೋಟಿ ರೂ.
ವಿಶ್ವಬ್ಯಾಂಕ್ ಬಾಹ್ಯ ನೆರವು - 500 ಕೋಟಿ ರೂ.
ಪ್ರತಿ ವರ್ಷ ಆಸ್ತಿತೆರಿಗೆ ಅಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತಿದೆ. ಈ ಸಾಲಿನಲ್ಲೂ ನಿರೀಕ್ಷೆಯಷ್ಟು ವಸೂಲಾಗುವ ಆಶಾಭಾವ ಇದೆ. ಪ್ರಾಪರ್ಟಿ ಟ್ಯಾಕ್ಸ್ ಜತೆಗೆ ಎಫ್ಎಆರ್, ಜಾಹೀರಾತು ಶುಲ್ಕ, ಉದ್ದಿಮೆ ಪರವಾನಗಿ ಶುಲ್ಕ, ಒಎಫ್ಸಿ ಕೇಬಲ್ ಶುಲ್ಕ ಇತ್ಯಾದಿ ಬಾಬ್ತಿನಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇರುವುದರಿಂದ ಘೋಷಿತ ಬಜೆಟ್ ಜಾರಿಗೆ ತೊಂದರೆ ಆಗದು.
- ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ
ಪಾಲಿಕೆಯಲ್ಲಿ ಮೊದಲ ಬಾರಿಗೆ ಅತಿ ದೊಡ್ಡ ಬಜೆಟ್ ಮಂಡಿಸಿದ್ದರೂ, ಅದನ್ನು ಜಾರಿ ಮಾಡುವ ಹೊಣೆ ಅಧಿಕಾರಿಗಳು ಹೊರುವ ಸಾಧ್ಯತೆ ಕಡಿಮೆ. ಆಸ್ತಿತೆರಿಗೆ ಹೊರತುಪಡಿಸಿ ಇನ್ನಿತರ ಬಾಬ್ತಿನಿಂದ ಹೆಚ್ಚಿನ ಆದಾಯ ಸಿಗದಿದ್ದರೂ, ಬೃಹತ್ ಮೊತ್ತದ ಆಯವ್ಯಯ ಅವೈಜ್ಞಾನಿಕ. ಯಾರನ್ನೋ ಮೆಚ್ಚಿಸಲು ಅವಾಸ್ತವಿಕ ಬಜೆಟ್ ಮಂಡಿಸಿ ತೆರಿಗೆದಾರರಿಗೆ ಅನ್ಯಾಯ ಮಾಡಲಾಗಿದೆ.
- ಎನ್.ಆರ್.ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ