ಬೆಂಗಳೂರು: ಕರೊನಾ ಸೋಂಕು ನಿಧಾನವಾಗಿ ತಗ್ಗುತ್ತಿದೆ. ಆದರೂ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಅತ್ಯವಶ್ಯಕ ಎಂದು ವೈದ್ಯರು ಮತ್ತು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಅದನ್ನು ಕೇಳರೆ, ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿ, ಅಡ್ಡಾದಿಡ್ಡಿ ಓಡಾಡಿದವರಿಗೆ ಬಿಬಿಎಂಪಿ ಶಾಕ್ ನೀಡಿದೆ. ಕಾರಣವಿಲ್ಲದೆ ರಸ್ತೆಗಳಿದವರಿಗೆ ಕರೊನಾ ಟೆಸ್ಟ್ ಮಾಡಲು ಪ್ರಯತ್ನಿಸಿದೆ.
ಬಿಬಿಎಂಪಿ ವತಿಯಿಂದ ಪ್ರತಿ ಏರಿಯಾದಲ್ಲೂ ಟೆಂಟ್ ಹಾಕಿಕೊಂಡು ಕರೊನಾ ಟೆಸ್ಟ್ ಮಾಡುತ್ತಿರುವುದನ್ನು ನೀವು ಗಮನಿಸಿರುತ್ತೀರಿ. ಧರ್ನರಾಯನ ಸ್ವಾಮಿ ದೇವಸ್ಥಾನದ ಬಳಿ ಅನವಶ್ಯಕವಾಗಿ ರಸ್ತೆಗಿಳಿಸಿದ್ದ ಯುವಕರಿಗೆ ಅಲ್ಲಿನ ಬಿಬಿಎಂಪಿ ಕರೊನಾ ಟೆಸ್ಟ್ ಸಿಬ್ಬಂದಿ ಕರೊನಾ ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿದ್ದಾರೆ. ಸಾಕಷ್ಟು ಸಮಯ ಈ ಯುವಕರು ಮತ್ತು ಸಿಬ್ಬಂದಿಯ ನಡುವೆ ವಾಗ್ವಾದ ನಡೆದಿದೆ. ಸಿಬ್ಬಂದಿ ಟೆಸ್ಟ್ ಮಾಡಲು ಮುಂದಾದರೆ ಯುವಕರು ಅದರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಕೊನೆಯಲ್ಲಿ ಸಿಟ್ಟಿಗೆದ್ದ ಸಿಬ್ಬಂದಿ ಯುವಕರಿಗೆ ಥಳಿಸಿ ಟೆಸ್ಟ್ ಮಾಡಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಯುವಕರದ್ದು ತಪ್ಪೇ ಇದ್ದರೂ ಈ ರೀತಿ ಹಲ್ಲೆ ಮಾಡಿ, ಬಲವಂತವಾಗಿ ಕರೊನಾ ಪರೀಕ್ಷೆ ಮಾಡಿಸಲು ಮುಂದಾಗಿದ್ದು ತಪ್ಪು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಟೆಸ್ಟ್ ಮಾಡಿಸಲು ಒಪ್ಪದ ಸಾರ್ವಜನಿಕರ ಮೇಲೆ ದೂರು ನೀಡಲು ಬಿಬಿಎಂಪಿ ನಿರ್ಧರಿಸಿದೆ. ಸದ್ಯ ಈ ವಿಚಾರ ಭಾರೀ ಚರ್ಚೆಯಲ್ಲಿದೆ.