ಬೆಂಗಳೂರು: ಮಹಾನಗರದ ವಿವಿಧ ಭಾಗಗಳಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಗುರುವಾರವೂ ಮುಂದುವರಿಸಿರುವ ಬಿಬಿಎಂಪಿ, ಅನಧಿಕೃತವಾಗಿ ರಸ್ತೆ ಮೇಲೆ ನಿರ್ಮಿಸಿದ್ದ ಕಟ್ಟಡಗಳ ಗೋಡೆ, ಅಂಗಡಿ ಮಳಿಗೆಗಳ ಮೇಲ್ಚಾವಣಿಯನ್ನು ತೆರವುಗೊಳಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಪೂರ್ವ, ಪಶ್ಚಿಮ, ದಕ್ಷಿಣ ಹಾಗೂ ಯಲಹಂಕ ವಲಯಗಳಲ್ಲಿ ಈ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಸ್ಥಳೀಯ ಇಂಜಿನಿಯರ್‌ಗಳ ಸಹಿತ ಪಾಲಿಕೆ ಸಿಬ್ಬಂದಿಗಲು ಟ್ರ್ಯಾಕ್ಟರ್‌ಗಳಲ್ಲಿ ತೆರವು ಮಾಡಿದ ವಸ್ತುಗಳನ್ನು ತುಂಬಿಕೊಂಡು ಆಯಾ ಕಚೇರಿಗಳಲ್ಲಿ ಇರಿಸಿವೆ. ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಿದೆ. ಇತ್ತೀಚಿಗೆ ಹೈಕೋರ್ಟ್ ಸೂಚನೆ ಮೇರೆಗೆ ಪಾಲಿಕೆ ಈ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಪೂರ್ವ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಒಎಫ್ಸಿ ಬಲ್‌ಗಳ ತೆರವು ಕಾರ್ಯಾಚರಣೆಯನ್ನು ಶಾಂತಿನಗರ, ಶಿವಾಜಿನಗರ, ಸಿ.ವಿ.ರಾಮನ್‌ನಗರ, ಪುಲಿಕೇಶಿನಗರ, ಸರ್ವಜ್ಞನಗರ ಹಾಗೂ ಹೆಬ್ಬಾಳ ಮತಕ್ಷೇತ್ರಗಳಲ್ಲಿ ಕೈಗೊಂಡಿದೆ. ಈ ವಲಯದಲ್ಲಿ 13 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ 104 ತಳ್ಳುವಗಾಡಿಗಳನ್ನು ಜಪ್ತಿ ಮಾಡಲಾಗಿದೆ. 54 ಪಾದಚಾರಿ ಮಾರ್ಗಕ್ಕೆ ಚಾಚಿಕೊಂಡ ಅಂಗಡಿ ಮುಂಗಟ್ಟುಗಳ ಮೇಲ್ಚಾವಣಿ, 19 ಅನಧಿಕೃತ ನಾಮಫಲಕಗಳು, 7000 ಮೀ. ಅನಧಿಕೃತ ಒಎಫ್ಸಿ ಕೇಬಲ್‌ಗಳು ತೆರವುಗೊಳಿಸಲಾಗಿದೆ ಎಂದು ವಲಯದ ಜಂಟಿ ಆಯುಕ್ತೆ ಕೆ.ಆರ್.ಪಲ್ಲವಿ ತಿಳಿಸಿದ್ದಾರೆ.
ಪಶ್ಚಿಮ ವಲಯದ ಮಹಾಲಕ್ಷ್ಮೀಪುರ ವಿಭಾಗ ನಾಗಪುರ ವಾರ್ಡ್‌ನಲ್ಲಿ ಅನಧಿಕೃತ ಒಎಫ್ಸಿ ಕೇಬಲ್‌ಗಳು ಹಾಗೂ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಡೆಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಜತೆಗೆ ಪೌರಕಾರ್ಮಿಕರು ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಚಾಮರಾಜಪೇಟೆ ವಾರ್ಡ್‌ನ 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆಯಿಂದ 9ನೇ ಅಡ್ಡರಸ್ತೆಯವರೆಗೆ ಒಟ್ಟು 0.80 ಕಿ.ಮೀ. ಅನಧಿಕೃತ ಎಂದು ಗುರುತಿಸಿದ್ದ ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಕಠಿಣ ಕ್ರಮದ ಎಚ್ಚರಿಕೆ:
ದಕ್ಷಿಣ ವಲಯ ಪದ್ಮನಾಭನಗರ ವ್ಯಾಪ್ತಿಯ ಬನಶಂಕರಿ ಉಪವಿಭಾಗದ ಗಣೇಶ ಮಂದಿರ, ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತಲಿನ 24ನೇ ಅಡ್ಡರಸ್ತೆ, 21ನೇ ಮುಖ್ಯರಸ್ತೆ, 17ನೇ ಮುಖ್ಯರಸ್ತೆ, 22ನೇ ಅಡ್ಡರಸ್ತೆ ಮತ್ತು 23ನೇ ಅಡ್ಡರಸ್ತೆಯಲ್ಲಿದ್ದ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದವರನ್ನು ಎತ್ತಂಗಡಿ ಮಾಡಲಾಯಿತು. ತೆರವು ಮಾಡಿದ ಸ್ಥಳದಲ್ಲಿ ಮತ್ತೆ ವಹಿವಾಟು ಮಾಡಲು ಮುಂದಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಯಲಹಂಕ ವಲಯದಲ್ಲಿ ಸೀಮಿತ ತೆರವು:
ಯಲಹಂಕ ವಲಯ ವ್ಯಾಪ್ತಿಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಸಹಕಾರನಗರ, ಕೊಡಿಗೇಹಳ್ಳಿ ಮುಖ್ಯರಸ್ತೆ, ಎನ್‌ಟಿಐ ಲೇಔಟ್, ವಿದ್ಯಾರಣ್ಯಪುರ ಹಾಗೂ ಅಟ್ಟೂರು ಲೇಔಟ್‌ನಲ್ಲಿ ಸೀಮಿತ ಪ್ರಮಾಣದ ತೆರವು ಕಾರ್ಯ ನಡೆಯಿತು. ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಬಾರದ ಕಾರಣ ಕಾಟಾಚಾರಕ್ಕೆ ಎಂಬಂತೆ ಕೆಲವೆಡೆ ಮಾತ್ರ ತಳ್ಳುಗಾಡಿ ಹಾಗೂ ಮಳಿಗೆಗಳ ಮುಂದಿದ್ದ ನಾಮಲಕ ತೆರವು ಮಾಡಲಾಯಿತು. ಆದರೆ, ಹೆಚ್ಚು ಒತ್ತುವರಿಗೆ ಒಳಗಾಗಿರುವ ಪ್ರದೇಶದಲ್ಲಿ ತೆರವು ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.