ಜಿಲ್ಲೆ

ಬಿಬಿಎಂಪಿಯಿಂದ ಸ್ಕೈವಾಕ್‌ಗಳಲ್ಲಿ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದಲ್ಲಿ ಸಾರ್ವಜನಿಕರ ಅನುಕೂಲತೆಗಾಗಿ ಹಾಗೂ ಸುರಕ್ಷತೆ ಹಿನ್ನೆಲೆ ಸ್ಥಾಪಿಸಿರುವ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ಗಳಲ್ಲಿ ಬಿಬಿಎಂಪಿಯಿಂದ ಸೋಮವಾರ ಸಾಮೂಹಿಕ ಸ್ವಚ್ಚತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಮಹಾನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನಾಗರಿಕರು ಸುಲಭವಾಗಿ ಓಡಾಡುವ ಉದ್ದೇಶದಿಂದ ಪಾದಚಾರಿಗಳ ಸುರಕ್ಷತೆ ದೃಷ್ಟಿಯಲ್ಲಿರಿಸಿ ಜನನಿಬಿಡ ಪ್ರದೇಶ, ಪ್ರಮುಖ ಜಂಕ್ಷನ್, ಬಸ್ ನಿಲ್ದಾಣಗಳು ಸೇರಿ ವಿವಿಧೆಡೆ 81 ಸ್ಕೈವಾಕ್ ನಿರ್ಮಿಸಲಾಗಿದೆ. ಇವುಗಳಲ್ಲಿ ಕೆಲವು ಶುಚಿ ಇಲ್ಲದೆ ಜನರ ಓಡಾಟಕ್ಕೆ ಅಡ್ಡಿಯುಂಟಾಗುತ್ತಿದ್ದ ಕಾರಣ ಪಾಲಿಕೆಗೆ ದೂರುಗಳು ಕೇಳಿಬಂದಿದ್ದವು. ಇದನ್ನಾಧರಿಸಿ ಇಂತಹ ಕಡೆಗಳಲ್ಲಿ ಸ್ವಚ್ಛತೆ ಕಾಪಾಡಲು ವಿಶೇಷ ಆಯುಕ್ತರೂ ಆದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮದ ಸಿಇಒ ಕರೀಗೌಡ ಅವರು ಪಾಲಿಕೆಯ ಎಲ್ಲ 8 ವಲಯಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ಪೌರಕಾರ್ಮಿಕರ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪಾದಚಾರಿ ಮೇಲ್ಸೇತುವೆಗಳ ಮೆಟ್ಟಿಲುಗಳು, ಪಾದಚಾರಿಗಳು ಓಡಾಡುವ ಮೆಲ್ಭಾಗ, ಸ್ಕೈವಾಕ್‌ಗಳಿಗೆ ಅಂಟಿಸಿರುವ ಬಿತ್ತಿ ಪತ್ರಗಳು, ಸುತ್ತಮುತ್ತಲಿನ ಸ್ಥಳದಲ್ಲಿ ಬಿದ್ದಿರುವ ತ್ಯಾಜ್ಯ, ಧೂಳನ್ನು ಸ್ವಚ್ಛಗೊಳಿಸಲಾಯಿತು.

77 ಸ್ಕೈವಾಕ್‌ಗಳಲ್ಲಿ ಸ್ವಚ್ಛತೆ:

ನಗರದ ವಿವಿದೆಡೆ ಅಂದರೆ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ, ಹೊಸೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಮಣಿಪಾಲ್ ಆಸ್ಪತ್ರೆ, ಮಾಗಡಿ ರಸ್ತೆ, ನಾಗರಭಾವಿ ಮುಖ್ಯರಸ್ತೆ, ಮೈಸೂರು ರಸ್ತೆ, ಟಿನ್ ಪ್ಯಾಕ್ಟರಿ, ಬೆಳ್ಳಂದೂರು ಸಿಂಗಸಂದ್ರ ಸೇರಿ 77 ಸೈವಾಕ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಸ್ಕೈವಾಕ್‌ಗಳನ್ನು ಬಳಸುವ ನಾಗರಿಕರು ಅಲ್ಲಿ ಸ್ವಚ್ಚತೆ ಕಾಪಾಡಬೇಕು. ಪ್ಲಾಸ್ಟಿಕ್ ಕವರ್, ಬಾಟಲ್, ಉಗುಳುವುದು, ಬಿತ್ತಿಪತ್ರಗಳನ್ನು ಅಂಟಿಸಬಾರದು. ಸ್ಕೈವಾಕ್‌ಗಳು ಸ್ವಚ್ಛವಾಗಿರಬೇಕಾದರೆ ನಾಗರಿಕರ ಸಹಕಾರ ಅತ್ಯವಶ್ಯಕವಾಗಿದ್ದು, ಕಸ ಹಾಕದೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಕರಿಗೌಡ ಮನವಿ ಮಾಡಿದ್ದಾರೆ.

ಸಮರ್ಪಕ ನಿರ್ವಹಣೆಗೆ ಸೂಚನೆ:

ನಗರದಲ್ಲಿ ಪಾದಚಾರಿ ಮೇಲ್ಸೇತುವೆಗಳನ್ನು ಬಿಬಿಎಂಪಿ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ವತಿಯಿಂದ ಸ್ಥಾಪಿಸಲಾಗುತ್ತಿದೆ. ಈ ಪೈಕಿ ಪಾಲಿಕೆಯ ಟಿಇಸಿ ವಿಭಾಗದಿಂದ 16 ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ 65 ಸ್ಕೈವಾಕ್‌ಗಳಿದ್ದು, ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸುವಂತೆ ಕರಿಗೌಡ ಸೂಚಿಸಿದ್ದಾರೆ.