ಜಿಲ್ಲೆ

ಕೆರೆಗಳಿಗೆ ಕೊಳಚೆ ನೀರು ಹರಿಯುವುದು ತಪ್ಪಿಸಿ: ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

ಬೆಂಗಳೂರು: ನಗರದ ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ಹಾಗೂ ರಸ್ತೆಗಳು ಜಲಾವೃತವಾಗುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ರಾವ್, ಜಲಮಂಡಳಿ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿ, ಯಾವ್ಯಾವ ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆ ಎಂಬುದನ್ನು ಗುರುತಿಸಬೇಕು. ಕೊಳಚೆ ನೀರು ಕೆರೆಗಳಿಗೆ ಹರಿಯದಂತೆ ಬೇರೆ ಕಡೆಗೆ ತಿರುಗಿಸಬೇಕು. ಕೆರೆಗಳ ಪಕ್ಕದಲ್ಲಿ ಒಳಚರಂಡಿಗಳಿಂದ ಕೊಳಚೆ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ವಾಯುವಿಹಾರ ಮಾರ್ಗ ಹಾಳಾಗುತ್ತಿದೆ. ಹಾಗಾಗಿ, ಕೂಡಲೆ ವಾಯುವಿಹಾರ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದರು.

ಮಳೆ ನೀರುಗಾಲುವೆಗಳಿಗೆ ಕೊಳಚೆ ನೀರು ಬಿಡುತ್ತಿರುವ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಒಳಚರಂಡಿ ಚೇಂಬರ್ಸ್‌ಗಳಲ್ಲಿ ಕೊಳಚೆ ನೀರು ಉಕ್ಕಿ ಹರಿಯುತ್ತಿದೆ.ಈ ಸಮಸ್ಯೆಯನ್ನು ಅಧಿಕಾರಿಗಳು ತಕ್ಷಣ ಬಗೆಹರಿಸಬೇಕು. ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೇನು ಸಮಸ್ಯೆ ಇದೆ, ಯಾವೆಲ್ಲಾ ಕ್ರಮ ಕೈಗೊಳ್ಳಬೇಕಿದೆ, ಜಲಮಂಡಳಿ,ಪಾಲಿಕೆಯಿಂದ ಏನು ಕ್ರಮ ಕೈಗೊಳ್ಳಬೇಕಿದೆ ಎಂಬುದನ್ನು ಪರಿಶೀಲಿಸಿ ಪಟ್ಟಿ ಮಾಡಬೇಕು. ಅನಂತರ, ಆ ಸಮಸ್ಯೆಗಳಿಗೆ ನಿಗದಿತ ಸಮಯವನ್ನು ನಿಗದಿಪಡಿಸಿ ಕಾಮಗಾರಿ ಪೂರ್ಣಗೊಳಿಸಬೇಕು. ರಾಜಕಾಲುವೆಗಳಲ್ಲಿ ಬಿಸಾಡುತ್ತಿರುವ ತ್ಯಾಜ್ಯದಿಂದಲೂ ಕೆರೆಗಳ ಒಡಲಿಗೆ ಸೇರುತ್ತಿದೆ. ಈ ಬಗ್ಗೆ ರಾಜಕಾಲುವೆ ವಿಭಾಗದಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ವಿಶೇಷ ಆಯುಕ್ತರಾದ ಮುನಿಷ್ ಮೌದ್ಗಿಲ್, ಕರೀಗೌಡ, ಸುರಳ್ಕರ್ ವಿಕಾಸ್ ಕಿಶೋರ್, ಪ್ರಿತಿ ಗೆಹ್ಲೋಟ್, ವಲಯ ಆಯುಕ್ತಾದ ರಮೇಶ್, ರಮ್ಯಾ, ದಿಗ್ವಿಜಯ್ ಬೋಡ್ಕೆ, ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ರಾಜೇಶ್, ಬಿಬಿಎಂಪಿ, ಜಲಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿದ್ದರು.

ಎಸ್‌ಟಿಪಿ ಪೂರ್ಣಗೊಳಿಸಿ

ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಸಿ) ಕಾಮಗಾರಿಗಳನ್ನು ಅದಷ್ಟೂ ವೇಗ ಮುಗಿಸಬೇಕು. ಎಸ್‌ಟಿಸಿನಲ್ಲಿ ಸಂಸ್ಕರಣೆಯಾದ ನೀರನ್ನು ಕೆರೆಗಳಿಗೆ ಬಿಡಬೇಕು. ಮಳೆಗಾಲದಲ್ಲಿ ಹೊರ ವರ್ತುಲ ಸೇರಿ ರಸ್ತೆಗಳು ಜಲಾವೃತವಾಗುವುದನ್ನು ತಪ್ಪಿಸಬೇಕು. ಹೆಬ್ಬಾಳ, ನಾಗವಾರ, ನಾಯಂಡಹಳ್ಳಿ, ಸುಮ್ಮನಹಳ್ಳಿ, ವಿದ್ಯಾಶಿಲ್ಪ ಜಂಕ್ಷನ್, ರೂಪೇನ ಅಗ್ರಹಾರ, ಮಾರತಹಳ್ಳಿ ಪೊಲೀಸ್ ಠಾಣೆ, ಕಾರ್ತಿಕ್ ನಗರ, ಕಸ್ತೂರಿ ನಗರ ಮೇಲ್ಸೇತುವೆ, ಪ್ಯಾಲೆಸ್ ಗುಟ್ಟಹಳ್ಳಿ, ಪಣತ್ತೂರು ರೈಲ್ವೆ ಕೆಳಸೇತುವೆ, ಆರ್.ಆರ್.ನಗರ ಗೇಟ್ ಸೇರಿ ನಗರದ ಇತರೆ ಸ್ಥಳಗಳಲ್ಲಿ ಜಲಾವೃತವಾಗುವುದನ್ನು ತಪ್ಪಿಸಬೇಕು ಎಂದು ಮಹೇಶ್ವರ್‌ರಾವ್ ಹೇಳಿದರು.

ರಸ್ತೆ ಗುಂಡಿ ಮುಚ್ಚಿ

ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಡೆ ಮೆಟ್ರೋ ವಿಭಾಗದ ಜೊತೆ ಸಮನ್ವಯ ಸಾಧಿಸಿ ಇರುವ ಸಮಸ್ಯೆ ಬಗೆಹರಿಸಬೇಕು. ರಸ್ತೆ ಬದಿಯ ಒಳಚರಂಡಿ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ರಸ್ತೆಗಳ ಮೇಲೆ ಬೀಳುವ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಹೊರ ವರ್ತುಲ ರಸ್ತೆ ಸೇರಿ ಪ್ರಮುಖ ರಸ್ತೆಗುಂಡಿಗಳ ಪಟ್ಟಿ ಅನುಸಾರ ಆದ್ಯತೆ ಮೇರೆಗೆ ರಸ್ತೆ ಗುಂಡಿ ಮುಚ್ಚಬೇಕು. ಇದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಬಿಬಿಎಂಪಿ ಮುಖ್ಯ ಆಯುಕ್ತರು ವಿವರಿಸಿದರು.