ಜಿಲ್ಲೆ

ಬಿಬಿಎಂಪಿ ಎಇಗೆ 25 ಸಾವಿರ ರೂ. ದಂಡ: ಕೆಐಸಿಯಿಂದ ಆದೇಶ

ಬೆಂಗಳೂರು: ಅರ್ಜಿದಾರನಿಗೆ ಅಗತ್ಯ ಮಾಹಿತಿ ನೀಡಲು ವಿಲವಾಗಿದ್ದಲ್ಲದೆ, ಮೇಲ್ಮನವಿ ಪ್ರಾಧಿಕಾರದ ವಿಚಾರಣೆಗೆ ಸತತ ಗೈರುಹಾಜರಾದ ಬಿಬಿಎಂಪಿಯ ಬ್ಯಾಟರಾಯನಪುರ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ (ಎಇ) ಪ್ರದೀಪ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ರಾಜ್ಯ ಮಾಹಿತಿ ಆಯೋಗ ಆದೇಶ ಹೊರಡಿಸಿದೆ.

ಎಇ ಪ್ರದೀಪ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಇದಕ್ಕೆ ಸ್ಪಂದಿಸದೆ ಎಲ್ಲ ವಿಚಾರಣೆಗೂ ಗೈರುಹಾಜಾರಾಗಿದ್ದಕ್ಕೆ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೂ ಬಗ್ಗದ ಈ ಇಂಜಿನಿಯರ್‌ಗೆ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಅವರ ವೇತನದಿಂದ ಕಟಾವು ಮಾಡಿ ಸರ್ಕಾರದ ಸಂಬಂಧಿತ ಖಾತೆಗೆ ಜಮೆ ಮಾಡುವಂತೆ ಯಲಹಂಕ ವಲಯದ ಮುಖ್ಯ ಅಭಿಯಂತರರಿಗೆ ಸೂಚಿಸಲಾಗಿದೆ.

ಇದೇ ವೇಳೆ ಅರ್ಜಿದಾರನಿಗೆ ಮಾಹಿತಿ ನೀಡದೆ ಸಮಸ್ಯೆ ಎದುರಿಸಿದ್ದನ್ನು ಪರಿಗಣಿಸಿ 3 ಸಾವಿರ ರೂ. ಪರಿಹಾರವನ್ನೂ ನೀಡುವಂತೆ ಆಯೋಗವು ಸೂಚನೆ ನೀಡಿದೆ.

ಏನಿದು ಪ್ರಕರಣ?:

ಬಸವೇಶ್ವರನಗರದ ರವಿಕುಮಾರ್ ಅವರು ಬ್ಯಾಟರಾಯನಪುರ ಉಪ ವಿಭಾಗದ ಕಚೇರಿ ವ್ಯಾಪ್ತಿಯಲ್ಲಿ 2022-23, 2023-24 ಹಾಗೂ 2024-25ನೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರ ನೀಡುವಂತೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ನಿಯಮ ಪ್ರಕಾರ 30 ದಿನಗಳಲ್ಲಿ ಮಾಹಿತಿ ನೀಡಲು ಎಇ ಪ್ರದೀಪ್ ವಿಲರಾಗಿದ್ದರು. ಇದನ್ನು ಪ್ರಶ್ನಿಸಿ ಮೊದಲ ಮೇಲ್ಮನವಿ ಪ್ರಾಧಿಕಾರಿ ಯಲಹಂಕ ವಲಯದ ಮುಖ್ಯ ಅಭಿಯಂತರರ ಮೊರೆ ಹೋಗಲಾಗಿತ್ತು. ಅಲ್ಲೂ ಮಾಹಿತಿ ಸಿಗದ ಕಾರಣ2ನೇ ಮೇಲ್ಮನವಿ ಪ್ರಾಧಿಕಾರವಾದ ಆಯೋಗದ ಕದ ತಟ್ಟಿದಾಗ ಪ್ರತಿವಾದಿಯಾಗಿದ್ದ ಪ್ರದೀಪ್‌ಗೆ ನೋಟಿಸ್ ನೀಡಲಾಗಿತ್ತು. ನಂತರವೂ ವಿಚಾರಣೆಗೆ ಗೈರು ಹಾಜರಾಗಿದ್ದಕ್ಕೆ ಎಚ್ಚರಿಕೆ ನೀಡಿ ದಂಡ ವಿಧಿಸುವುದಾಗಿ ಆಯೋಗ ಹೇಳಿತ್ತು.

ಈ ವಿಷಯವನ್ನು ಪಾಲಿಕೆಯ ಹಿಂದಿನ ಹಾಗೂ ಹಾಲಿ ಮುಖ್ಯ ಆಯುಕ್ತರ ಗಮನಕ್ಕೂ ತರಲಾಗಿತ್ತು. ಇದರ ಹೊರತಾಗಿಯೂ ಕೊನೆಯ ವಿಚಾರಣೆಗೆ ಹಾಜರಾಗದ ಅಧಿಕಾರಿಯ ದುವರ್ತನೆ ಹಾಗೂ ಮಾಹಿತಿ ನಿರಾಕರಿಸಿದ್ದನ್ನು ಪರಿಗಣಿಸಿ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಎಇ ಪ್ರದೀಪ್‌ಗೆ ದಂಡ ವಿಧಿಸಿ ಆದೇಶಿಸಿದ್ದಾರೆ.