ಬೆಂಗಳೂರು: ಮಹಾನಗರದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣದ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಯಲಹಂಕ ವಲಯದ ತಿಂಡ್ಲು ಗ್ರಾಮದಲ್ಲಿ ಅನುಮತಿ ಇಲ್ಲದೆ ನಿರ್ಮಿಸುತ್ತಿದ್ದ ಬೃಹತ್ ಶೆಡ್ ಒಂದರ ಮಾಲೀಕರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ.
ತಿಂಡ್ಲು ಗ್ರಾಮದ ಸರ್ಕಾರಿ ಶಾಲೆ ಬಳಿಯಿರುವ ಸರ್ವೆ ನಂ.74ಕ್ಕೆ ಸೇರಿದ 26.05 ಗುಂಟೆ ಜಾಗದಲ್ಲಿ ಖಾಸಗಿ ವ್ಯಾಕ್ತಿಯೊಬ್ಬರು ಗ್ಯಾಸ್ ಗೋದಾಮು, ಕಾರ್ ಸರ್ವಿಸ್ ಸೆಂಟರ್ ಹಾಗೂ ಕಾರ್ ಕೇರ್ ಟ್ರೇಡಿಂಗ್‌ಗಾಗಿ ಬೃಹತ್ ಕಂಬಗಳನ್ನು ಒಳಗೊಂಡ ಶೆಡ್ ನಿರ್ಮಿಸುತ್ತಿದ್ದರು. ಈ ಕಟ್ಟಡಕ್ಕೆ ಪಾಲಿಕೆಯಿಂದ ಯಾವುದೇ ರೀತಿಯ ಅನುಮತಿ ಪಡೆದಿರಲಿಲ್ಲ. ನಕ್ಷೆ, ಆರಂಭಿಕ ಪ್ರಮಾಣಪತ್ರವನ್ನು ಮಾಲೀಕರು ತೆಗೆದುಕೊಂಡಿರಲಿಲ್ಲ. ಈ ಕುರಿತು ಪಾಲಿಕೆಯ ಮುಖ್ಯ ಆಯುಕ್ತರಿಗೆ ಸ್ಥಳೀಯರು ದೂರು ನೀಡಿದ್ದರು. ದೂರು ಆಧರಿಸಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಲಯದ ಆಯುಕ್ತರಿಗೆ ಸೂಚನೆ ನೀಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಜತಗೆ ಅನಧಿಕೃತ ಭಾಗಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು.
ಈ ಆದೇಶ ಆಧರಿಸಿ ಯಲಹಂಕ ವಲಯದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಜತೆಗೆ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರು ಹಾಗೂ ಸ್ಥಳೀಯ ಎಇಇ ಅನಧಿಕೃತ ನಿರ್ಮಾಣವನ್ನು ಖಚಿತಪಡಿಸಿಕೊಂಡು ಅಲ್ಲಿನ ಕಾಮಗಾರಿಯನ್ನು ತಡೆದಿದ್ದಾರೆ. ಜತೆಗೆ ಪಾಲಿಕೆ ವತಿಯಿಂದ ಬ್ಯಾನರ್ ಅಳವಡಿಸಿ ಅನಧಿಕೃತ ನಿರ್ಮಾಣಕ್ಕೆ ತಡೆ ಒಡ್ಡಿದ್ದಾರೆ. ವಲಯದ ಎಲ್ಲೂ ಅನಧಿಕೃತ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.