ವಿಜಯವಾಣಿ ಸುದ್ದಿಜಾಲ ಧಾರವಾಡ
ಬಯಲಾಟ ಜಾನಪದ ಕಲೆಗಳಲ್ಲೇ ಗಂಡು ಕಲೆ. ಇದು ನಮ್ಮ ಗ್ರಾಮೀಣ ಭಾರತದ ಜೀವಾಳ ಎಂದು ಕರ್ನಾಟಕ ಬಯಲಾಟ ಅಕಾಡಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸಾಸನೂರ ಸಹೋದರರ ಸಂಸ್ಮರಣ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ವಿಶೇಷ ವ್ಯಾಖ್ಯಾನ ಮಾಲೆ ಕಾರ್ಯಕ್ರಮದಲ್ಲಿ ಬಯಲಾಟಗಳು ಹಾಗೂ ಕನ್ನಡ ಭಾಷೆ ಕುರಿತು ಮಾತನಾಡಿದರು.
ಬಯಲಾಟ ಗ್ರಾಮೀಣ ಅನಕ್ಷರಸ್ಥರ ಮಧ್ಯ ಸೃಷ್ಟಿಯಾದ ಜನಪದ ಕಲೆ. ರೈತಾಪಿ ಜನರು ಸುಗ್ಗಿಯ ನಂತರ ವಿರಾಮದ ವೇಳೆಯಲ್ಲಿ, ಜಾತ್ರೆ ಹಾಗೂ ಹಬ್ಬಗಳಲ್ಲಿ ಮನರಂಜನೆಗಾಗಿ ಆಡುವ ಕಲೆಯಾಗಿದೆ. ಬಯಲಾಟ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿ, ಧರ್ಮದವರನ್ನು ಒಳಗೊಂಡು ಈ ಬಯಲಾಟ ಆಡುವರು. ಉತ್ತರ ಕರ್ನಾಟಕದ ಬಹಳಷ್ಟು ಕಲಾವಿದರು ಬಯಲಾಟದ ಮೂಲಕವೇ ತಮ್ಮ ಕಲಾಪ್ರೌಢಿಮೆ ಹೆಚ್ಚಿಸಿಕೊಂಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ. ಸಿದ್ಧಣ್ಣ ಜಕಬಾಳ ಮಾತನಾಡಿ, ನಮ್ಮಲ್ಲಿ ಶಿಷ್ಟ ಸಾಹಿತ್ಯಕ್ಕಿಂತ ಮೌಖಿಕ ಸಾಹಿತ್ಯವೇ ವಿಫುಲವಾಗಿ ಬೆಳದು ಬಂದಿದೆ. ಜನಪದ ರಂಗಭೂಮಿ ಕರ್ನಾಟಕದಲ್ಲಿ ಸಮೃದ್ಧವಾಗಿ ಬೆಳೆದು ಬಂದ ಒಂದು ವೈವಿಧ್ಯಮಯ ಕಲೆಯಾಗಿದೆ. ಬಯಲಾಟದಲ್ಲಿ ಲಯವೇ ಪ್ರಧಾನವಾದ ಅಂಶ ಎಂದರು.
ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.