ಲ್ಯಾಟರೈಟ್ (ಕೆಂಪು ಕಲ್ಲು) ಗಣಿಗಾರಿಕೆ
- ಆಂಧ್ರಪ್ರದೇಶದ ಸಿಮೆಂಟ್ ಕಾರ್ಖಾನೆಗಳಿಗೆ ಮಾರಾಟ
- ಸುದ್ದಿಗೋಷ್ಠಿಯಲ್ಲಿ ಬೆನೆಡಿಕ್ಟ್ ಫೆರ್ನಾಂಡಿಸ್ ಆರೋಪ
ಮಂಗಳೂರು: ಲ್ಯಾಟರೈಟ್ (ಕೆಂಪು ಕಲ್ಲು) ಗಣಿಗಾರಿಕೆ ಹೆಸರಿನಲ್ಲಿ ಲೀಸಿನಲ್ಲಿ ಅನುಮತಿ ಪಡೆದು ಅಲ್ಯೂಮಿನಿಯಂ ಲ್ಯಾಟರೈಟ್ (ಬಾಕ್ಸೈಟ್) ಗಣಿಗಾರಿಕೆ ನಡೆಸಿ ಪರಿಸರಕ್ಕೆ ಧಕ್ಕೆ ತರುತ್ತಿರುವುದು ಮಾತ್ರವಲ್ಲದೆ ಸರ್ಕಾರದ ಬೊಕ್ಕಸಕ್ಕೂ ಅಪಾರ ಪ್ರಮಾಣದ ಆದಾಯದಲ್ಲಿ ನಷ್ಟವನ್ನು ತಂದೊಡ್ಡಲಾಗುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘದ ಬೆನೆಡಿಕ್ಟ್ ಫೆರ್ನಾಂಡಿಸ್ ಅವರು ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಮತ್ತು ಇತರ ಭಾಗಗಳಲ್ಲಿ ಈ ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಸಿಕ್ಕಿದೆ. ಲೀಸಿನ ಪ್ರದೇಶದಲ್ಲಿ ನಿಜವಾದ ಲ್ಯಾಟರೈಟ್ ಕಂಡುಬಂದಲ್ಲಿ ಅದನ್ನು ತೆಗೆಯುವುದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ತೆಗೆಯುತ್ತಿರುವ ಖನಿಜದಲ್ಲಿ ಶೇ. 30ಕ್ಕಿಂತ ಹೆಚ್ಚು ಅಲ್ಯೂಮಿನಾ ಹೊಂದಿರುವ ಅಲ್ಯೂಮಿನಸ್ ಲ್ಯಾಟರೈಟ್ (ಬಾಕ್ಸೈಟ್) ಇದೆ. ಲ್ಯಾಟರೈಟ್ ಎಂದು ಹೇಳಿ ಬಾಕ್ಸೈಟ್ ತೆಗೆಯುವುದು ಕಾನೂನು ವಂಚನೆಯಾಗಿದೆ. ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಯುತ್ತಿದೆ. ಲ್ಯಾಟರೈಟ್ ಹೆಸರಿನಲ್ಲಿ ಗಣಿಗಾರಿಕೆ ಮಾಡಲಾಗುತ್ತಿರುವ ಖನಿಜವನ್ನು ಆಂಧ್ರಪ್ರದೇಶದಲ್ಲಿನ ಸಿಮೆಂಟ್ ಕಾರ್ಖಾನೆಗಳಿಗೆ ಮಾರಲಾಗುತ್ತಿದೆ. ಇಲ್ಲಿ ಮುಖ್ಯ ಸಿಮೆಂಟ್ ಕಾರ್ಖಾನೆಗಳು ಕೇವಲ ಅಲ್ಯೂಮಿನಸ್ ಲ್ಯಾಟರೈಟ್ ಅನ್ನು ಮಾತ್ರವೇ ಖರೀದಿಸುತ್ತದೆ. ಇದಕ್ಕೆ ಭಾರಿ ಬೇಡಿಕೆಯೂ ಇದೆ ಎಂದರು.
ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಇದೇ ರೀತಿಯಲ್ಲಿ ಗಣಿಗಾರಿಕೆ ನಡೆದರೆ ಪರಿಸರ ನಾಶಕ್ಕೆ ಕಾರಣವಾಗುತ್ತದೆ. ಇದಕ್ಕೆ ನಮ್ಮ ವಿರೋಧ ಇದೆ ಎಂದವರು ತಿಳಿಸಿದರು. ಸಂಘದ ಪ್ರಕಾಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
ಜಿಲ್ಲಾಡಳಿತ ಏನು ಮಾಡಬೇಕು?
- ದ.ಕ. ಜಿಲ್ಲೆಯ ಎಲ್ಲಾ ಲ್ಯಾಟರೈಟ್ ಗಣಿಗಾರಿಕೆ ಲೀಸುಗಳನ್ನು ತಕ್ಷಣ ಪರಿಶೀಲಿಸಬೇಕು.
- ಪ್ರತಿ ಸಕ್ರಿಯ ಗಣಿಗಾರಿಕೆ ಲೀಸುಗಳಿಂದ ಪ್ರತಿನಿಧಿ ಮಾದರಿಗಳನ್ನು ಸಂಗ್ರಹಿಸಿ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು.
- ತೆಗೆದುಯುತ್ತಿರುವ ಖನಿಜವು ರಾಸಾಯನಿಕ ಸಂಯೋಜನೆಯ ಪ್ರಕಾರ ಅಲ್ಯೂಮಿನಸ್ ಲ್ಯಾಟರೈಟ್ (ಬಾಕ್ಸೈಟ್) ಆಗಿದೆಯೇ ಎಂದು ಪರಿಶೀಲಿಸಬೇಕು.
- ಕಾನೂನು ಉಲ್ಲಂಘಿಸಿದ್ದರೆ ತತ್‌ಕ್ಷಣ ಪರವಾನಿಗೆ ರದ್ದುಪಡಿಸಿ ಗಣಿಗಾರಿಕೆ ಸ್ಥಗಿತಗೊಳಿಸಬೇಕು.
- ಅಕ್ರಮ ಸಾಗಣೆದಾರರ ಮೇಲೂ ಕ್ರಮ ವಹಿಸಬೇಕು.