ಜಿಲ್ಲೆ

ಚನ್ನಪಟ್ಟಣದಲ್ಲಿ ಸೋತವರ ಕಾಳಗ

ನಿಖಿಲ್​- ಸಿಪಿವೈ ಚುನಾವಣೆಯಲ್ಲಿ ಸೋತವರೇ - ಗೆಲುವು ಮಾತ್ರ ಸುಲಭವಲ್ಲ

ಗಂಗಾಧರ್​ ಬೈರಾಪಟ್ಟಣ ರಾಮನಗರ

ಹೈ ವೋಲ್ಟೇಜ್​ ಕ್ಷೇತ್ರವಾಗಿರುವ ಚನ್ನಪಟ್ಟಣ ಈಗ ಸೋತವರ ನಡುವಿನ ಅಖಾಡಕ್ಕೆ ಸಿದ್ದಗೊಂಡಿದೆ. ಕಳೆದ ಹಲವು ದಿನಗಳಿಂದಲೂ ನಡೆದ ಟಿಕೆಟ್​ ಹಗ್ಗ ಜಗ್ಗಾಟ ಅಂತಿಮಗೊಂಡಿದ್ದು, ಎರಡೂ ಕಡೆಯ ಹುರಿಯಾಳುಗಳು ಯಾರು ಎನ್ನುವುದು ನಿಗದಿಯಾಗಿದೆ. ಆದರೆ, ಅಖಾಡದ ಜಟ್ಟಿಗಳಿಬ್ಬರೂ ಸಾಲು ಸೋಲುಗಳನ್ನೇ ಕಂಡವರು. ಇಬ್ಬರಿಗೂ ಗೆಲುವಿನ ಶಕ್ತಿ ಬೇಕಿದ್ದು, ಉಳಿದ ದಿನಗಳಲ್ಲಿ ಸಾಕಷ್ಟು ಕಸರತ್ತು ನಡೆಸಿ ಬೆವರು ಹರಿಸಬೇಕಿದೆ.

ಇಬ್ಬರೂ ಸೋತವರೇ

ಎನ್​ ಡಿಎ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಮತ್ತು ಕಾಂಗ್ರೆಸ್​ ಹುರಿಯಾಳು ಸಿ.ಪಿ.ಯೋಗೇಶ್ವರ್​ ಇಬ್ಬರೂ ಸತತ ಸೋಲುಗಳನ್ನು ಕಂಡವರು. 2019ರಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಲೋಕಸಭೆ ಪ್ರವೇಶದ ಕನಸು ಕಂಡಿದ್ದ ನಿಖಿಲ್​ ಅವರಿಗೆ ಮೊದಲ ಪ್ರಯತ್ನವೇ ಆಘಾತ ನೀಡಿತು. ನಂತರ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ರಾಮನಗರದ ರಾಜಕೀಯ ಲೆಕ್ಕಾಚಾರ ಏರುಪಾರಾಗಿ, ಎರಡನೇ ಸೋಲು ಅರಗಿಸಿಕೊಳ್ಳಲಾಗದಂತೆ ಮಾಡಿತು. ಇದೀಗ ಮೂರನೇ ಬಾರಿಗೆ ತಮ್ಮ ಚುನಾವಣಾ ರಾಜಕೀಯ ಭವಿಷ್ಯವನ್ನೇ ಅಡಮಾನವಿಟ್ಟಂತೆ ನಿಖಿಲ್​ ಸ್ಪರ್ಧೆ ಮಾಡಲು ಒಪ್ಪಿದ್ದಾರೆ.

ಅತ್ತ ಯೋಗೇಶ್ವರ್​ ಸತತ ಸೋಲುಗಳಿಂದ ಹೈರಾಣಾಗಿದ್ದಾರೆ. ನೀರಾವರಿ ಯೋಜನೆ ಜಾರಿ ಹೊರತಾಗಿಯೂ ಚನ್ನಪಟ್ಟಣ ಕ್ಷೇತ್ರದ ಮತದಾರರು 2018 ಮತ್ತು 2023ರ ಎರಡೂ ಚುನಾವಣೆಯಲ್ಲಿಯೂ ಸೋಲಿಸಿದರು. ಅದಾಗಲೇ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ ಅಧಿಕಾರ ಅನುಭವಿಸಿದವರು. ಆದರೆ, ಸತತ ಎರಡು ಸೋಲು ಇವರ ರಾಜಕೀಯ ದಿಕ್ಕನ್ನೆ ಬದಲು ಮಾಡಿತು. ಈಗ ಮತ್ತೊಮ್ಮೆ ತಮ್ಮ ರಾಜಕೀಯ ಅನುಭವವನ್ನೇ ಪಣಕ್ಕೆ ಇಟ್ಟಿದ್ದಾರೆ.

ಗೆಲುವು ಬೇಕೇ ಬೇಕು

ನಿಖಿಲ್​ ಮತ್ತು ಯೋಗೇಶ್ವರ್​ ಇಬ್ಬರಿಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲುವು ಅನಿವಾರ್ಯ. ಯಾರೇ ಸೋಲು ಕಂಡರೂ ಬಹುತೇಕ ಅವರ ಚುನಾವಣಾ ರಾಜಕೀಯ ಜೀವನಕ್ಕೆ ಮಸಕು ಕವಿದಂತೆಯೇ. ಮಂಡ್ಯ ಮತ್ತು ರಾಮನಗರದಲ್ಲಿ ಸೋಲಿನ ಕಹಿ ಅನುಭವ ಈಗಾಗಲೇ ನಿಖಿಲ್​ ಅವರಿಗೆ ಸಾಕಷ್ಟು ಪಾಠವನ್ನು ಕಲಿಸಿದೆ. ಒಂದು ವೇಳೆ ಚನ್ನಪಟ್ಟಣದಲ್ಲಿಯೂ ಸೋಲಾದರೆ ಇದನ್ನು ನಿಖಿಲ್​ ಮಾತ್ರವೇ ಅಲ್ಲ ಜೆಡಿಎಸ್​ ಕುಟುಂಬವೇ ಅರಗಿಸಿಕೊಳ್ಳುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ನಿಖಿಲ್​ಗೆ ಗೆಲುವು ಅನಿವಾರ್ಯ. ಮತ್ತೊಂದೆಡೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರೂ ಯೋಗೇಶ್ವರ್​ ಸೋಲುಗಳನ್ನು ನಿರೀಕ್ಷೆ ಮಾಡಿರಲಿಲ್ಲ. ಇವರ ಸೋಲುಗಳ ಹೊಡೆತದಿಂದ ಹೊರಬರಬೇಕಾದರೆ ಖಂಡಿತವಾಗಿ ಗೆಲುವು ಬೇಕೇಬೇಕಿದೆ.

ರಂಗೇರಿದ ಅಖಾಡ

ಗುರುವಾರ ಮಧ್ಯಾಹ್ನದವರೆಗೂ ಎನ್​ಡಿಎ ಮೈತ್ರಿ ಕೂಟದ ಅಭ್ಯರ್ಥಿ ಯಾರು ಎನ್ನುವ ಗೊಂದಲ ಹಾಗೇ ಉಳಿದಿತ್ತು. ಒಂದು ಹಂತದಲ್ಲಿ ತಾಲೂಕು ಜೆಡಿಎಸ್​ ಟಕದ ಅಧ್ಯಕ್ಷ ಜಯಮುತ್ತು ಹೆಸರು ಅಂತಿಮಗೊಂಡಿದೆ ಎನ್ನುವ ಸುದ್ದಿ ಹರಿದಾಡಿ, ಚುನಾವಣೆ ಒಂದೆಡೆ ವಾಲಿದೆ ಎನ್ನುವ ಲೆಕ್ಕಾಚಾರವೂ ಆರಂಭಗೊಂಡಿತ್ತು. ಆದರೆ ಅಂತಿಮವಾಗಿ ನಿಖಿಲ್​ ಸ್ಪರ್ಧೆಗೆ ಗ್ರೀನ್​ ಸಿಗ್ನಲ್​ ಕೊಡುತ್ತಿದ್ದಂತೆ ಚನ್ನಪಟ್ಟಣ ಚುನಾವಣಾ ಕಣದ ಚಿತ್ರಣವೇ ಬದಲಾಗಿಬಿಟ್ಟಿತು. ಅವರ ಕಡೆ ಬಲಿಷ್ಠ ಅಭ್ಯರ್ಥಿ ಇಲ್ಲ ಎಂದುಕೊಂಡಿದ್ದ ಕಾಂಗ್ರೆಸ್ಸಿಗರು ನಿಖಿಲ್​ ಹೆಸರು ಘೋಷಣೆ ಆಗುತ್ತಿದ್ದಂತೆ ಕೊಂಚ ಗಲಿಬಿಲಿಗೊಳ್ಳುವಂತೆ ಆಯಿತು.

ಗೆಲುವು ಸುಲಭವಲ್ಲ

ಸೋತವರ ಗುದ್ದಾಟದಲ್ಲಿ ಗೆಲುವು ಅನಿವಾರ್ಯವಾಗಿದೆ. ಆದರೆ, ಗೆಲುವು ಅಷ್ಟು ಸುಲಭವಲ್ಲ ಎನ್ನುವ ವಾಸ್ತವ ಎರಡೂ ಕಡೆಯವರಿಗೆ ಗೊತ್ತಿದೆ. ಕುಮಾರಸ್ವಾಮಿ ತಮ್ಮ ಮಗನ ಮೂಲಕವೇ ತಮ್ಮ ರಾಜಕೀಯ ಬುನಾದಿಯನ್ನು ಗಟ್ಟಿಗೊಳಿಸಿಕೊಳ್ಳಲು ಹೊರಟಿದ್ದಾರೆ. ಆದರೆ, ಎದುರಾಳಿ ಅಷ್ಟು ಸುಲಭಕ್ಕೆ ಬಗ್ಗು ಬಡಿಯುವಂಥದ್ದಲ್ಲ ಎನ್ನುವುದು ಅರಿವಿಗೆ ಇದೆ. ಒಂದೆಡೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್​ & ಎನ್​ಡಿಎ ಮೈತ್ರಿ ಕೂಟದ ಚುನಾವಣೆ ಎನ್ನುವುದಕ್ಕಿಂತ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಕದನವಾಗಿ ಮಾರ್ಪಡಲಿದೆ ಎಂದರೆ ತಪ್ಪಾಗಲಾರದು.

ಯೋಗೇಶ್ವರ್​ ಪರವಾಗಿ ಇಡೀ ರಾಜ್ಯ ಸರ್ಕಾರವೇ ಚನ್ನಪಟ್ಟಣದಲ್ಲಿ ಬೀಡು ಬಿಡಲಿದೆ. ಅದೇ ರೀತಿ ನಿಖಿಲ್​ ಪರವಾಗಿ ಕೇಂದ್ರದ ಹಲವಾರು ಸಚಿವರೂ ಪ್ರಚಾರ ಕಣಕ್ಕೆ ಇಳಿಯಲಿದ್ದು ಗೆಲುವು ಯಾರದ್ದು ಎನ್ನುವ ಊಹೆ ಬಹುಶ@ ಕೊನೆಯ ಹಂತದವರೆಗೂ ಕಷ್ಟವಾಗಲಿದೆ.