ಜಿಲ್ಲೆ

ಜಿಪಿಟಿ ಶಿಕ್ಷಕರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ...

ಪ್ರಶಾಂತ ಜಿ. ಭಾಗ್ವತ

ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಭಿಪ್ರಾಯ

ಬುನಾದಿ ತರಬೇತಿ ಕಾಯಾಗಾರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಇಂದಿನ ದಿನದಲ್ಲಿ ಸರ್ಕಾರಿ ಉದ್ಯೋಗ ದೊರಕುವುದೇ ಅಪರೂಪ. ಅದರಲ್ಲೂ ರಾಷ್ಟ್ರದ ಭವಿಷ್ಯ ರೂಪಿಸುವ ಶಿಕ್ಷಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಆಯ್ಕೆಗೊಂಡಿರುವ ನಿಮ್ಮಿಂದ ಸಮಾಜದಿಂದಲೂ ಅಪಾರ ನಿರೀಕ್ಷೆಗಳಿವೆ. ಆ ನಿಟ್ಟಿನಲ್ಲಿ ಜಿಪಿಟಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಫೆ.13ರಂದು ಆಯೋಜಿಸಿದ್ದ ಉಡುಪಿ ಜಿಲ್ಲೆಯಲ್ಲಿ ನೇಮಕಗೊಂಡ 200 ಮಂದಿ ಜಿಪಿಟಿ ಶಿಕ್ಷಕರಿಗೆ ಬುನಾದಿ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಸನ್ಮಾನ, ಕೃತಿ ಬಿಡುಗಡೆ

ರಾಷ್ಟ್ರಮಟ್ಟದಲ್ಲಿ ವೀರಗಾಥಾ 4.0 ಸ್ಪರ್ಧೆಯ ಬಹುಮಾನ ವಿಜೇತರಾದ ಕಾರ್ಕಳದ ಶ್ರೀಮದ್​ ಭುವನೇಂದ್ರ ಶಾಲೆಯ ವಿದ್ಯಾರ್ಥಿನಿ ಸ್ನಿಗ್ಧಾ ಎ. ಹಾಗೂ ಹೆಬ್ರಿಯ ಎಸ್​ಆರ್​ ಪಬ್ಲಿಕ್​ ಶಾಲೆಯ ವಿದ್ಯಾರ್ಥಿ ವಿಘ್ನೇಶ್​ ಆಚಾರ್ಯ ಅವರಿಗೆ ಸ್ಮರಣಿಕೆ ನೀಡಿ ಜಿಲ್ಲಾಧಿಕಾರಿ ಸನ್ಮಾನಿಸಿದರು. ಆಲೂರು ವೆಂಕಟರಾವ್​ ಭಾಷಾ ಕೌಶಲ ತರಬೇತಿ ಕೇಂದ್ರದ ಅನುದಾನದಲ್ಲಿ ರಚನೆಗೊಂಡ ಶಿಕ್ಷಣ ಸಾಹಿತ್ಯ ಸಂಪದ ಕೃತಿಯನ್ನೂ ಬಿಡುಗಡೆ ಮಾಡಿದರು.

ಉಡುಪಿ ಜಿಲ್ಲೆಯ ಕನ್ನಡ ಒಲಂಪಿಯಾಡ್​ನಲ್ಲಿ ಜಿಲ್ಲಾ ಮಟ್ಟದ ವಿಜೇತರಿಗೆ ಜಿಪಂ ಸಿಇಒ ಪ್ರತೀಕ್​ ಬಾಯಲ್​ ಬಹುಮಾನ ವಿತರಿಸಿ, ಸಂದರ್ಭೋಚಿತವಾಗಿ ಮಾತನಾಡಿದರು. ಮಣಿಪಾಲದ ರೋಟರಿ ಸಂಸ್ಥೆಯ ಉಪಾಧ್ಯಕ್ಷೆ ಶಶಿಕಲಾ ರಾಜವಮಾರ್ ಅರಿಗ, ಡಿಡಿಪಿಐ ಗಣಪತಿ ಕೆ., ನೋಡಲ್​ ಅಧಿಕಾರಿ ಗಣೇಶ್​ ಭಾಗ್ವತ್​ ಉಪಸ್ಥಿತರಿದ್ದರು.

ಶೈಕ್ಷಣಿಕ ಉಪನ್ಯಾಸ

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಶಿಶುತಜ್ಞೆ ಡಾ. ಪ್ರೀತಿ ಗಲಗಲಿ ಮಕ್ಕಳಲ್ಲಿ ಮೊಬೈಲ್​ ಬಳಕೆ ಕುರಿತು, ವಿವೇಕಾನಂದ ಅನುಸಂಧಾನ ಕೇಂದ್ರದ ನಿರ್ದೇಶಕ ಡಾ. ಎಚ್​. ಎನ್​. ಮುರಳೀಧರ್​ ಶಿಕ್ಷಣ ಮತ್ತು ಮೌಲ್ಯ ಕುರಿತು, ಮಣಿಪಾಲ ರೋಟರಿ ಹಿಲ್ಸ್​ನ ಅಧ್ಯಕ್ಷೆ ಸುಪರ್ಣಾ ಜೀವನ ಕೌಶಲ-ಅಭಿವೃದ್ಧಿ ತಂತ್ರ ಕುರಿತು, ಸಿಟಿಇ ಮಂಗಳೂರಿನ ವಿಶ್ರಾಂತ ಉಪನ್ಯಾಸಕ ಡಾ. ಎನ್​.ಶಿವಪ್ರಕಾಶ್​ ಜಿಪಿಟಿ ಶಿಕ್ಷಕರ ಕರ್ತವ್ಯ ಕುರಿತು ಉಪನ್ಯಾಸ ನೀಡಿದರು.

ಡಯಟ್​ ಪ್ರಾಂಶುಪಾಲ ಮಂಜುನಾಥ ಎಚ್​.ಟಿ. ಅಧ್ಯಕ್ಷತೆ ವಹಿಸಿದ್ದರು. ಡಯಟ್​ ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್​ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಪ್ರಭಾಕರ್​ ಮಿತ್ಯಾಂತ ವಂದಿಸಿದರು. ಉಪನ್ಯಾಸಕ ಯೋಗಾ ನರಸಿಂಹ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.