ಜಿಲ್ಲೆ

ಗೌರಿ ಗಣೇಶ ಹಬ್ಬಕ್ಕೆ ಖರೀದಿ ಜೋರು

ಲಲಾಟಾಕ್ಷ ಎಸ್

ಹುಣಸೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹುಣಸೂರು ನಗರದ ಮಾರುಕಟ್ಟೆ ಮತ್ತು ಬಜಾರ್ ರಸ್ತೆ ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಹೂವು, ಹಣ್ಣು ಮತ್ತು ಬಳೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದ್ದಿದ್ದರಿಂದ ಬೆಲೆಯೂ ಕೂಡ ಗಗನಕ್ಕೇರಿತ್ತು. ಅಲ್ಲಲ್ಲಿ ಗಣಪತಿಯ ಬಣ್ಣಬಣ್ಣದ ಮೂರ್ತಿಗಳು ಇಡೀ ಮಾರುಕಟ್ಟೆಯನ್ನು ಆವರಿಸಿತ್ತು.


ಗುರುವಾರ ಹುಣಸೂರು ನಗರದಲ್ಲಿ ಸಂತೆ ಕಟ್ಟುವ ದಿನವೂ ಆಗಿದ್ದರಿಂದ ಹಾಗೂ ಶುಕ್ರವಾರ ಮತ್ತು ಶನಿವಾರ ಗೌರಿಗಣೇಶ ಹಬ್ಬದ ಅಂಗವಾಗಿ ಸಾರ್ವಜನಿಕರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಸೇವಂತಿಗೆ ಹೂವು ಮಾರು ಒಂದಕ್ಕೆ 120 ರೂ.ದರವಿತ್ತು. ಗೌರಿ ಹಬ್ಬಕ್ಕೆ ಬಾಗಿನ ನೀಡಲು ಅವಶ್ಯಕವಾದ ಬಳೆ ಬಿಚ್ಚೋಲೆಗಳಿಗೆ ಬೇಡಿಕೆ ಹೆಚ್ಚಾಗಿದ್ದ ಕಾರಣ ಮಹಿಳೆಯರು ಬಳೆ ಅಂಗಡಿಗಳಿಗೆ ಮುಗಿಬಿದ್ದಿದ್ದರು. ತರಕಾರಿ, ಹಣ್ಣುಗಳ ಬೆಲೆ ಏರಿದ್ದರೂ ಕೊಳ್ಳುವವರ ಸಂಭ್ರಮ ಕಡಿಮೆಯಾಗಿರಲಿಲ್ಲ. ಈ ನಡುವೆ ಗಣಪತಿಯನ್ನು ಕೊಳ್ಳುವವರು ಇಂದೇ ಅಂಗಡಿ ಮಾಲೀಕರಿಗೆ ಮುಂಗಡ ಹಣ ಪಾವತಿಸಿ ತಮಗಿಷ್ಟವಾದ ಮೂರ್ತಿಯನ್ನು ಕಾಯ್ದಿರಿಸಿಕೊಂಡು ಹೋಗುತ್ತಿದ್ದರು.