ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ತಂಗುದಾಣ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಯುವ ಶಕ್ತಿ ಸದಸ್ಯರು ಬಾಶೆಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ ಶಿವಶಂಕರ್‌ಗೆ ಮನವಿ ಸಲ್ಲಿಸಿದರು.
ಬಾಶೆಟ್ಟಿಹಳ್ಳಿ ಮೂಲಕ ಬೆಂಗಳೂರು- ಹಿಂದೂಪುರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಬೆಂಗಳೂರು, ಹಿಂದೂಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಸೇರಿ ವಿವಿಧ ಕಡೆ ತೆರಳಲು ಸಾಕಷ್ಟು ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ಯಾವುದೇ ಸುಸಜ್ಜಿತ ತಂಗುದಾಣ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಆದ್ದರಿಂದ ಪ್ರಯಾಣಿಕರಿಗಾಗಿ ಸೂಕ್ತ ತಂಗುದಾಣದ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದರು.
ಶಾಲಾಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ದೂರದ ಊರಿಗೆ ಪ್ರಯಾಣಿಸುವವರು ಸರ್ಕಾರಿ ಹಾಗೂ ಖಾಸಗಿ ಬಸ್ಸಿಗಾಗಿ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ. ಉರಿಬಿಸಿಲು, ಸುರಿವ ಮಳೆಯಲ್ಲಿ ಹೆದ್ದಾರಿಯ ಬದಿಯಲ್ಲಿ ನಿಲ್ಲುತ್ತಾರೆ. ಇದರಿಂದಾಗಿ ಹೆದ್ದಾರಿ ಅಪಘಾತಗಳು ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ತಂಗುದಾಣ ಇಲ್ಲದ ಕಾರಣ ಕೆಲ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತವೆ, ಕೆಲವೊಮ್ಮೆ ನಿಲುಗಡೆ ಮಾಡದೆ ಹೊರಟು ಹೋಗುತ್ತವೆ. ಇದೊಂದು ಸಾರ್ವಜನಿಕ ಸಮಸ್ಯೆ ಎಂದು ಪರಿಗಣಿಸಿ ಶೀಘ್ರ ವ್ಯವಸ್ಥಿತ ಬಸ್ ತಂಗುದಾಣದ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಆಗ್ರಹಿಸಿದರು.