ಸುಂಟಿಕೊಪ್ಪ: ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ನೆಲೆಸಿರುವ 2 ಶತಮಾನಗಳ ಹಿಂದಿನ ಬಸವೇಶ್ವರ ದೇವಾಲಯ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ಕೊಡಗಿನಲ್ಲಿ ಹಾಲೇರಿ ರಾಜವಂಶಸ್ಥರು ನಿರ್ಮಿಸಿದ್ದ ದೇವಾಲಯವನ್ನು ಟಿಪ್ಪು ಆಡಳಿತದ ಸಂದರ್ಭ ನಾಶಗೊಳಿಸಿರುವ ಬಗ್ಗೆ ಹಿರಿಯರು ಹೇಳುತ್ತಾರೆ. ನಾಶಗೊಂಡ ದೇಗುಲದಲ್ಲೇ ನಿತ್ಯ ಪೂಜಾ ಕೈಂಕರ್ಯ ನಡೆಸಲಾಗುತ್ತಿತ್ತು. 2 ವರ್ಷದ ಹಿಂದೆ ಗ್ರಾಮಸ್ಥರು ಒಟ್ಟು ಸೇರಿ ದೇವಾಲಯ ಜೀರ್ಣೋದ್ಧಾರ ಮಾಡಿದರು. ಹಿಂದಿನ ದೇವರ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ದೇಗುಲದಲ್ಲಿ ಭಕ್ತಿಯಿಂದ ಬೇಡಿಕೊಂಡಿದ್ದನ್ನು ಬಸವೇಶ್ವರ ಕರುಣಿಸುತ್ತಾನೆ ಎಂಬ ನಂಬಿಕೆ ಭಕ್ತರದ್ದು. 7ನೇ ಹೊಸಕೋಟೆ, ಉಪ್ಪುತೋಡು, ಕಂಬಿಬಾಣೆ, ಕೊಡಗರಹಳ್ಳಿ, ಕಲ್ಲೂರು, ಸುಂಟಿಕೊಪ್ಪ ಭಾಗದ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಕ್ಕೆ ತೆರಳಿ ವಿವಿಧ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುತ್ತಾರೆ.
ಬಸವೇಶ್ವರ, ಗಣಪತಿ, ಸುಬ್ರಹ್ಮಣ್ಯ, ಮುನೀಶ್ವರ ದೇವರನ್ನು ದೇಗುಲದಲ್ಲಿ ಪೂಜಿಸಲಾಗುತ್ತದೆ. ಗುಳಿಗ ಕಲ್ಲಿನ ಮೂರ್ತಿಯನ್ನು ದೇವಾಲಯ ಆವರಣದಲ್ಲಿ ಇರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಇರುವ ಈ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿದೆ.
ಪ್ರತಿ ತಿಂಗಳ ಸಂಕ್ರಮಣದ ಮಾರನೆ ದಿನ ವಿಶೇಷ ಪೂಜೆ ನಡೆಸಲಾಗುತ್ತದೆ. ವಾರ್ಷಿಕ ಸುಬ್ರಹ್ಮಣ್ಯ ಷಷ್ಟಿಯಂದು ವಿಶೇಷ ಪೂಜಾ ಕೈಂಕರ್ಯ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಗುತ್ತದೆ. ಕೊಡಗಿನ ವಿಶೇಷ ಹಬ್ಬಗಳಲ್ಲಿ ಒಂದಾದ ಹುತ್ತರಿಯಂದು ಭತ್ತದ ಪೈರನ್ನು ದೇವಾಲಯಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ದೇವಾಲಯದ ಪ್ರಧಾನ ಆರ್ಚಕರಾಗಿ 23 ವರ್ಷಗಳಿಂದ ಶ್ರೀನಿವಾಸ್ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ.
====
2018ರಲ್ಲಿ ದೇಗುಲ ಜೀರ್ಣೋದ್ದ್ಧಾರ ಶುರು
ಗ್ರಾಮದ ಹಿರಿಯರು ಹಾಗೂ ದಾನಿಗಳ ನೆರವಿನಿಂದ 2018ರಲ್ಲಿ ದೇಗುಲ ಜೀರ್ಣೋದ್ಧಾರ ಕಾಮಗಾರಿ ಕೈಕೊಂಡು 2022ರ ಫೆ.6ರಲ್ಲಿ ಮೂರ್ತಿಗಳ ಮರುಪ್ರತಿಷ್ಠಾಪಿಸಲಾಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಆರ್.ದಿಲೀಪ್ ಕುಮಾರ್ ಮುಂದಾಳತ್ವದಲ್ಲಿ ಕೇರಳದ ತಂತ್ರಿಗಳಾದ ವಿನಿತ್ ನಂಬೂದರಿ ಅವರ ನೇತೃತ್ವದಲ್ಲಿ ಮೂರ್ತಿಗಳ ಮರುಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಾಯಿತು. ಭಕ್ತರು, ಸುತ್ತಮುತ್ತಲ ಗ್ರಾಮದವರ ನೆರವಿನಿಂದ ದೇಗುಲ ಮರುಪ್ರತಿಷ್ಠಾಪನಾ ಕಾರ್ಯ ಯಶಸ್ವಿಯಾಯಿತು.
ಹಿಂದೆ ದೇವಾಲಯವನ್ನು 12 ಸೆಂಟು ಜಾಗದಲ್ಲಿ ನಿರ್ಮಿಸಲಾಗಿತ್ತು. ಬೆಂಗಳೂರಿನ ಉದ್ಯಮಿ ಶುಭಾಕರನ್ ಎಂಬುವವರು 26 ಸೆಂಟು ಜಾಗವನ್ನು ಖರೀದಿಸಿ ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕೆ.ಆರ್.ದಿಲೀಪ್‌ಕುಮಾರ್ 10 ಸೆಂಟು ಹಾಗೂ ಕೆ.ಆರ್.ಬಾಬು ಎಂಬುವವರು 15 ಸೆಂಟು ಜಾಗವನ್ನು ನೀಡುವ ಮೂಲಕ ದೇವಾಲಯ ವಿಸ್ತಾರವಾಗಿ ನಿರ್ಮಿಸಲು ಸಹಕಾರ ನೀಡಿದ್ದಾರೆ. ದೇಗುಲದಲ್ಲಿ ಗಣಪತಿ ದೇವಸ್ಥಾನ, ಸುಬ್ರಹ್ಮಣ್ಯ, ಮುನೀಶ್ವರ, ಗುಳಿಗಸ್ಥಾನಗಳಿದ್ದು, ನೈವೇದ್ಯ ಕೊಠಡಿ, ಕಚೇರಿ, ಸಣ್ಣ ಸಭಾಂಗಣ ಪಾಕಶಾಲೆ ನಿರ್ಮಿಸಲಾಗಿದೆ.
ದೇವಾಲಯದಲ್ಲಿ ನಿರ್ಮಿಸಲಾಗಿರುವ ಕಚೇರಿ, ಸಭಾಂಗಣ ಮತ್ತು ಪಾಕಶಾಲೆಯನ್ನು ಶುಭಾಕರನ್ ನಿರ್ಮಿಸಿಕೊಟ್ಟಿದ್ದಾರೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.