ಸರಗೂರು ತಾಲೂಕಿನ ಲಂಕೆ ಗ್ರಾಮದಲ್ಲಿ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.  
ಜಿಲ್ಲೆ

ಲಂಕೆ ಗ್ರಾಮದಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ

ಸರಗೂರು: ತಾಲೂಕಿನ ಲಂಕೆ ಗ್ರಾಮದಲ್ಲಿ ಶ್ರೀ ಬಸವೇಶ್ವರರ ಜಯಂತೋತ್ಸವ ಅಂಗವಾಗಿ ಸೋಮವಾರ ಸಂಜೆ ಬಸವೇಶ್ವರರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಲಂಕೆ ಗ್ರಾಮದ ದೇವಸ್ಥಾನದ ಮುಂಭಾಗ ಮೆರವಣಿಗೆಗೆ ಗ್ರಾಮದ ಯಜಮಾನರು, ಸಾಮಾಜದ ಮುಖಂಡರು ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷರು, ಗ್ರಾಪಂ ಸದಸ್ಯರು ಚಾಲನೆ ನೀಡಿದರು.

ಗೌಡಿಕೆ ಯಜಮಾನ ನಾಗರಾಜು ಮಾತನಾಡಿ, ಸಮಾನತೆಯ ಹರಿಕಾರ ಬಸವಣ್ಣ 12ನೇ ಶತಮಾನದಲ್ಲಿ ಬಸವ ಧರ್ಮವನ್ನು ಸ್ಥಾಪನೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಮೌಢ್ಯ, ಕಂದಾಚಾರ ಹಾಗೂ ಜಾತಿ ಪದ್ಧತಿ ವಿರುದ್ಧ ಹೋರಾಟ ಮಾಡಿದರು. ಜತೆಗೆ ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಎಲ್ಲ ವರ್ಗದವರಿಗೂ ಸಮಾನ ಅವಕಾಶ ಮಾಡಿಕೊಟ್ಟರು. ಆ ಮೂಲಕ ಸಮ ಸಮಾಜ ನಿರ್ಮಾಣ ಮಾಡಿದರು ಎಂದು ಬಣ್ಣಿಸಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ, ಬಸವಣ್ಣ ಎಂದರೆ ನಮ್ಮೆಲ್ಲರ ಶಕ್ತಿ. ಅವರ ಒಂದು ನಾಮಬಲದಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿದೆ. ಅವರ ಜನ್ಮ ದಿನದಂದು ಪುಣ್ಯ ಕಾರ್ಯ ಮಾಡುವ ಜತೆಗೆ ಯುವಶಕ್ತಿ ಅವರ ತತ್ವ-ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜತೆಗೆ ವಚನಗಳ ಸಾರವನ್ನು ತಿಳಿದು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಲು ಮುಂದಾಗಬೇಕು ಎಂದರು.

ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ವೀರಗಾಸೆ, ಮಂಗಳ ವಾದ್ಯ, ಭಜನೆ, ನಂದಿ ಧ್ವಜ, ಡೋಲು ಸೇರಿದಂತೆ ವಿವಿಧ ಕಲಾತಂಡಗಳು ಮೆರುಗು ನೀಡಿದವು.