ಜಿಲ್ಲೆ

ವೀರಶೈವರ ವಿರುದ್ಧ ರಾಜಕೀಯ ಷಡ್ಯಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇಸರ

ಕೆ.ಎನ್.ರಾಘವೇಂದ್ರ

ಮಂಡ್ಯ: ವೀರಶೈವ ಸಮುದಾಯ ಬೃಹದಾಕಾರದ ಆಲದ ಮರವಿದ್ದಂತೆ. ಇದು ನಮ್ಮ ಸಮಾಜಕ್ಕಷ್ಟೇ ಅಲ್ಲ ಬೇರೆ ಸಮುದಾಯಗಳಿಗೂ ನೆರಳನ್ನ ಕೊಡುವ ಶಕ್ತಿ ಇದೆ. ಆದರೆ ಒಳಪಂಗಡಗಳಾಗಿ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಷಾದಿಸಿದರು.

ನಗರದ ಮೈಷುಗರ್ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಬಸವ ಸಮಿತಿ, ವೀರಶೈವ ಲಿಂಗಾಯತ ಸೌಹಾರ್ದ ಮತ್ತು ಸಹಕಾರಿ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರರ 892ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ವಚನಗಳನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಬಸವಣ್ಣನವರ ಸಮಸಮಾಜದ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ್ದರು. ಹೋರಾಟಗಾರ, ರೈತ ನಾಯಕ ಯಡಿಯೂರಪ್ಪನವರಿಗೆ ಜನ್ಮ ಕೊಟ್ಟ ಪುಣ್ಯಭೂಮಿ ಮಂಡ್ಯ. ಬಸವಣ್ಣನವರ ಸಮಸಮಾಜದ ಕನಸು ನನಸು ಮಾಡಿದವರು ಯಡಿಯೂರಪ್ಪ ಎಂದರು.

ನಮ್ಮ ಸಮಾಜದ ನಡುವೆ ವೀರಶೈವ ಸಮಾಜ ಪ್ರತ್ಯೇಕ ಧರ್ಮವೆಂದು ಹೇಳಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಇದರಲ್ಲಿ ರಾಜಕೀಯ ಶಕ್ತಿಗಳ ಕೈವಾಡವಿದೆ. ವೇದಿಕೆ ಸಿಕ್ಕಂತ ಸಂದರ್ಭದಲ್ಲಿ ಸಮಾಜ ಹಾಗೂ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರೆ. ಆದರೆ ನಡೆಗೂ ನುಡಿಗೂ ಬಹಳ ವ್ಯತ್ಯಾಸವಿರುವುದನ್ನು ನೋಡುತ್ತೇವೆ. ಇದರ ಬಗ್ಗೆ ನಮ್ಮ ಪ್ರಬುದ್ಧ ಸಮಾಜದ ಮುಖಂಡರು ಗಂಭೀರ ಚರ್ಚೆ ಮಾಡಬೇಕು. ಯಾವುದೇ ಜಾತಿ ಕೇಳದೆ ತ್ರಿವಿಧ ದಾಸೋಹವನ್ನ ವೀರಶೈವ ಲಿಂಗಾಯತ ಮಠಗಳು ಮಾಡುತ್ತಿವೆ. ಎಲ್ಲ ಒಳಪಂಗಡಗಳನ್ನ ಮರೆತು ನಾವೆಲ್ಲರೂ ಒಟ್ಟಾಗಿ ಹೋಗಬೇಕು. ಅಸೂಯೆ, ಅಸಂತೋಷದ ಮಧ್ಯೆ ನಾವುಗಳು ಇದ್ದೇವೆ. ನಮ್ಮ ಮಕ್ಕಳಿಗೆ ಶಿಕ್ಷಣದ ಜತೆ ಉತ್ತಮ ಸಂಸ್ಕಾರ ನೀಡುವುದು ಮುಖ್ಯ. ಪ್ರಸ್ತುತದಲ್ಲಿ ನಮ್ಮ ಸಮಾಜದವರು ಚಿಂತನೆಗೊಳಪಡಬೇಕು ಎಂದು ಸಲಹೆ ನೀಡಿದರು.

ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಮೇಲು, ಕೀಳು, ಅಸಮಾನತೆಯನ್ನು ಹೋಗಲಾಡಿಸಲು ಬಸವಣ್ಣನವರು ಜಾತಿ ರಹಿತ ಧರ್ಮ ರಚನೆ ಮಾಡಿದರು. ಜತೆಗೆ ಆಡುಭಾಷೆಯಲ್ಲಿಯೇ ವಚನಗಳ ಮೂಲಕ ಸಮಾಜದ ಬದಲಾವಣೆ ತಂದು ಯಶಸ್ವಿಯಾಗಿದ್ದರು. ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರಾಗಿರುವ ಬಸವಣ್ಣನವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ. ಮಾನವೀಯತೆಯ ಸಿದ್ಧಾಂತವನ್ನು ಪ್ರತಿಪಾದಿಸಿ ಜನಮನ್ನಣೆಗಳಿಸಿದರು. ಬಸವ ಮಂಟಪದಲ್ಲಿ ಅನುಭವ ಮಂಟಪ ರಚಿಸಿದರು. ಅದಕ್ಕಿಂತಲೂ ಮುಂಚಿತವಾಗಿ ಬಿಜ್ಜಳ ರಾಜನ ಆಸ್ಥಾನದಲ್ಲಿ ಆರ್ಥಿಕ ಸಚಿವರಾಗಿ ಕೆಲಸ ಮಾಡಿದ್ದರು. ಮೌಢ್ಯ ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಲು ಟೊಂಕಕಟ್ಟಿ ನಿಂತರು ಎಂದು ಶ್ಲಾಘಿಸಿದರು.

ಬಸವ ಧರ್ಮದಲ್ಲಿ ಜಾತಿ ರಹಿತವಾಗಿ ಧರ್ಮ ಸ್ಥಾಪಿಸಿದರು. 21ನೇ ಶತಮಾನದಲ್ಲಿಯೂ ಮರ್ಯಾದೆ ಹತ್ಯೆ ಕಾಣುತ್ತೇವೆ. ಜಾತಿ ಎಂಬುದನ್ನು ಮೊದಲು ಬಿಡಬೇಕು. ಪರಿವರ್ತನೆಯಾಗಬೇಕಾದರೆ ಬಸವ ಭಾರತ ಹಾಗೂ ಬಸವ ಕರ್ನಾಟಕ ಆಗಬೇಕು. ವೀರಶೈವ ಲಿಂಗಾಯತ ಸಮಾಜವು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು ತಲಾ ಒಂದು ಕೋಟಿ ಜನರಿದ್ದೇವೆ. ಆದರೆ ಬಸವಣ್ಣನವರನ್ನು ಅಷ್ಟಕ್ಕೆ ಸೀಮಿತವಾಗಿಟ್ಟಿದ್ದೇವೆ. ಜಗತ್ತಿನಲ್ಲಿ ಬಸವಣ್ಣನವರ ವಚನಗಳನ್ನು ಪಸರಿಸುವಂತೆ ನೋಡಬೇಕಿದೆ ಎಂದು ಸಲಹೆ ನೀಡಿದರು.

ಪರಸ್ಪರ ಎಲ್ಲರನ್ನೂ ಅಪ್ಪಿಕೊಳ್ಳುವ ಸಮುದಾಯವೆಂದರೆ ಅದು ವೀರಶೈವ ಸಮಾಜವಾಗಿದೆ. ಏಕೆಂದರೆ ಸಿದ್ದಗಂಗಾಶ್ರೀ, ಸುತ್ತೂರು ಮಠ ಸೇರಿದಂತೆ ಹಲವು ಮಠಗಳು ಎಲ್ಲ ವರ್ಗದ ಜನರಿಗೆ ಶಿಕ್ಷಣ, ದಾಸೋಹ ಹಾಗೂ ಆಶ್ರಯ ನೀಡುತ್ತಿದ್ದೇವೆ. ನಾವೆಲ್ಲರೂ ಸಂಘಟನೆ ಆಗಬೇಕಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕದವರೆಲ್ಲರೂ ಹೊಂದಾಗಬೇಕು ಆ ಮೂಲಕ ಬೆಸುಗೆ ಆಗಬೇಕಿದೆ. ಉಪ್ಪಾರ, ಕುಂಬಾರ, ಕಮ್ಮಾರ ಸೇರಿದಂತೆ ಕಾಯಕ ಸಮುದಾಯಗಳೆಲ್ಲವನ್ನೂ ಒಗ್ಗೂಡಿಸಬೇಕು. ಅವರೆಲ್ಲರನ್ನೂ ದೂರ ಇಟ್ಟಿದ್ದೇವೆ ಎನ್ನುವ ಮನೋಭಾವ ಹೋಗಲಾಡಿಸಬೇಕು. ಲಿಂಗಾಯತ ಸಮುದಾಯದವರಿಂದ ಅನುಭವ ಮಂಟಪದಲ್ಲಿ ಕಲ್ಯಾಣ ಕ್ರಾಂತಿ ಆಗಿದ್ದು. ಆನಂತರ ಛಿದ್ರವಾಗಿ ಹೋದವು. ಆದರೆ ಅವುಗಳನ್ನು ಮತ್ತೆ ಹೊಂದು ಮಾಡಿಕೊಳ್ಳಬೇಕು. ಹರಿದು ಹೋದ ಬಸವ ಸಾಹಿತ್ಯವನ್ನು ಮತ್ತೆ ಒಂದು ಮಾಡುವ ಮೂಲಕ ಸಂಘಟನೆಗೊಳ್ಳುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದ ಅನುಕೂಲಕ್ಕಾಗಿ ಬಸವ ಮಂಟಪ ಕಟ್ಟಲು 1 ಕೋಟಿ ರೂ ಅನುದಾನ ನೀಡಲಾಗುವುದು. ಬಡವರಿಗೆ ಅನುಕೂಲವಾಗಲೆಂದು ಈ ಕಾರ್ಯ ಮಾಡಲಾಗುತ್ತಿದೆ. ಮಂಡ್ಯದ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನಿಡಲು ನಗರಸಭೆಯಲ್ಲಿ ಮಂಡಿಸಿ, ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.

ಕನಕಪುರ ದೇಗುಲಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ಇಡೀ ಜಗತ್ತು ಗೌರವಿಸುವ ರೀತಿಯಲ್ಲಿ ಬದುಕಿದ್ದರು. ಅವರು ನಡೆದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಆದರೆ ಇಂದಿನ ಯುವಜನತೆಯು ದಿಕ್ಕು ತಪ್ಪುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅವರಿಗೆ ಬಸವಣ್ಣನವರ ತತ್ವಗಳನ್ನು ಮನವರಿಕೆ ಮಾಡುವ ಮೂಲಕ ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಮಹದೇವ ಬಿದರಿ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಬಸವೇಶ್ವರಿ ಮಾತಾಜಿ, ಸಂಘದ ರಾಜ್ಯಾಧ್ಯಕ್ಷ ಮುಕ್ತಾಂಭ ಬಸವರಾಜ್, ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ಜಿಲ್ಲಾಧ್ಯಕ್ಷ ಆನಂದ್ ತಾಳಶಾಸನ, ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಎಂ.ಎಸ್.ಶಿವಪ್ರಕಾಶ್ ಇತರರಿದ್ದರು.