ಸರಗೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸರಗೂರು ತಾಲೂಕು ಘಟಕದಿಂದ ಜೂ.23ರಂದು ಪಟ್ಟಣದಲ್ಲಿ ಬಸವೇಶ್ವರರ ಜಯಂತಿ ಮಹೋತ್ಸವ, ಮಹಾಸಭಾದ ನೂತನ ಕಚೇರಿ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಮಹಾಸಭಾ ಸರಗೂರು ತಾಲೂಕು ಅಧ್ಯಕ್ಷ ಕೆ.ಎಂ.ವೀರಭದ್ರಪ್ಪ ತಿಳಿಸಿದರು.
ಪಟ್ಟಣದಲ್ಲಿರುವ ವಿವೇಕಾನಂದ ಆಸ್ಪತ್ರೆ ಸಮೀಪದ ವೀರಶೈವ ಲಿಂಗಾಯತ ಸಮಾಜದ ನಿವೇಶನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನೂತನ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ಕ್ಕೆ ಬಿಡಗಲು ಪಡುವಲು ಶ್ರೀ ವಿರಕ್ತಮಠದ ಮಹಾದೇವ ಸ್ವಾಮೀಜಿ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸುವರು. ಮಹಾಸಭಾದ ಗೌರವಾಧ್ಯಕ್ಷ ಹಂಚೀಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಶ್ರೀ ಷಡಕ್ಷರಿಸ್ವಾಮೀಜಿ ಬಸವೇಶ್ವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡುವರು. ವಿವಿಧ ಮಠಾಧೀಶರು ಆಶೀರ್ಚವನ ನೀಡಲಿದ್ದಾರೆ ಎಂದು ಹೇಳಿದರು.
ಧಾರ್ಮಿಕ ಸಭೆ: ಮಧ್ಯಾಹ್ನ 12ಕ್ಕೆ ಶುರುವಾಗುವ ಧಾರ್ಮಿಕ ಸಭೆಯಲ್ಲಿ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಗುರುಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಶ್ರೀ ಮಹಾಂತಸ್ವಾಮೀಜಿ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ. ಮಹಾಸಭಾದ ನೂತನ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸುವರು. ಶಾಸಕ ಅನಿಲ್ ಚಿಕ್ಕಮಾದು ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದು, ಮಹಾಸಭಾ ಅಧ್ಯಕ್ಷ ಕೆ.ಎಸ್.ವೀರಭದ್ರಪ್ಪ ಅಧ್ಯಕ್ಷತೆ ವಹಿಸುವರು. ಮಹಾಸಭಾದ ರಾಜ್ಯ ಅಧ್ಯಕ್ಷ ಶಂಕರ ಮಹದೇವ ಬಿದರಿ ಪ್ರತಿಭಾ ಪುರಸ್ಕಾರ ವಿತರಿಸುವರು ಎಂದರು.
ಅತಿಥಿಗಳಾಗಿ ಸಂಸದರಾದ ಸುನೀಲ್‌ಬೋಸ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ, ಜಿ.ಟಿ.ದೇವೇಗೌಡ, ಎಂಎಲ್ಸಿಗಳಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಮಹಾಸಭಾದ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾಶ್ರೀನಾಥ್, ಉಪಾಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ಆಗಮಿಸುವರು ಎಂದು ಹೇಳಿದರು.
ಸಭಾದ ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಉಪಾಧ್ಯಕ್ಷ ಡಿ.ಸಿ.ಸಿದ್ದಪ್ಪ, ಕಾರ್ಯದರ್ಶಿಗಳಾದ ಎಂ.ಎನ್. ಬಸವರಾಜು, ಜಯಕುಮಾರ್, ಬಸವ ಬಳಗ ಅಧ್ಯಕ್ಷ ಹಂಚೀಪುರ ಗಣಪತಿ, ಯುವ ಸಮಿತಿ ಅಧ್ಯಕ್ಷ ಪಿ. ನಂದೀಶ್, ಪಪಂ ಉಪಾಧ್ಯಕ್ಷ ಶಿವಕುಮಾರ್, ನಿರ್ದೇಶಕರಾದ ಎಸ್ ಸಿ ಮಹದೇವಸ್ವಾಮಿ ಹಾಜರಿದ್ದರು.
ಮೆರವಣಿಗೆ : ನಂದಿಧ್ವಜದೊಂದೊಂದಿಗೆ ಶ್ರೀ ಬಸವೇಶ್ವರ ಪುತ್ಥಳಿ, ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ವಿವಿಧ ಗ್ರಾಮಗಳಿಂದ ಪಲ್ಲಕ್ಕಿ ಉತ್ಸವ ಪಾಲ್ಗೊಳ್ಳಲಿವೆ. ಮೆರವಣಿಗೆಯಲ್ಲಿ ಶರಣರ ವಚನಗಳು, ಅಲಂಕೃತ ಸ್ತಬ್ಧಚಿತ್ರಗಳು, ಭಜನಾ ಮೇಳ, ವೀರಗಾಸೆ ಕುಣಿತ, ವೀರಭದ್ರ ನ್ಯತ್ಯ, ಮಹಿಳಾ ಜಾನಪದ ಕಲಾವಿದರಿಂದ ವೀರಗಾಸೆ, ಡೊಳ್ಳು ಕುಣಿತ, ಮಂಗಳವಾದ್ಯ ಜತೆಗೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತರಲಿವೆ. ಸರಗೂರು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕೆಇಬಿ ಕಚೇರಿ ಮುಂಭಾಗದಿಂದ ಹೊರಟು ಎರಡನೇ ಮುಖ್ಯ ರಸ್ತೆಯ ಮೂಲಕ ಹಾದು ಸಂತೆ ಮಾಸ್ತಮ್ಮ ದೇವಸ್ಥಾನ ಮುಂಭಾಗದಲ್ಲಿ ಸಾಗಿ ಸಮಾಜದ ನಿವೇಶನದಲ್ಲಿ ನಿರ್ಮಿಸಿರುವ ಶರಣರ ಅನುಭವ ಮಂಟಪ ಸೇರಲಿದೆ.