ಮೈಸೂರು: ಬಸವಣ್ಣ ಅವರನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ ಅವರ ತತ್ವಾದರ್ಶ ಪಾಲಿಸಲು ಯಾರೂ ಮನಸ್ಸು ಮಾಡುತ್ತಿಲ್ಲ ಎಂದು ಸಾಹಿತಿ ಬನ್ನೂರು ಕೆ.ರಾಜು ಬೇಸರ ವ್ಯಕ್ತಪಡಿಸಿದರು.
ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಬಸವ ಜಯಂತಿ’ ಹಾಗೂ ‘ಗುರುವಂದನಾ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ‘ಬಸವ ಭೂಷಣ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಇವನಾರವ ಎನ್ನದೇ ಎಲ್ಲರೂ ಮನುಷ್ಯರಾಗಿ ಬದುಕಬೇಕೆಂಬುದು ಅವರ ಆಶಯವಾಗಿತ್ತು. ಅವರು ಇಡೀ ಮಾನವ ಕುಲದ ಉದ್ಧಾರಕರಾಗಿದ್ದರು. ಅವರು ಈ ನಾಡಿನಲ್ಲಿ ಜನಿಸದೆ ಹೋಗಿದ್ದಲ್ಲಿ ನಾವೆಲ್ಲ ತಾರತಮ್ಯದ ಕೂಪದಲ್ಲಿ, ಅನಿಷ್ಠ ಪದ್ಧತಿಗಳ ನಡುವೆ ಬದಕುಬೇಕಾಗಿತ್ತು ಎಂದು ತಿಳಿಸಿದರು.
12ನೇ ಶತಮಾನದಲ್ಲಿ ಬಸವಣ್ಣ ವಚನ ಕ್ರಾಂತಿಗೆ ಕಾರಣರಾದರು. ಆ ಮೂಲಕ ಮನುಷ್ಯತ್ವದ ಬೀಜ ಬಿತ್ತಿದರು. ಕಾಲಕಾಲಕ್ಕೆ ಇಂತಹ ಮಹನೀಯರು ಬಂದು ಮಾನವತ್ವ ಸಾರಿದರೂ ಅದನ್ನು ನಿರ್ಲಕ್ಷಿಸುತ್ತಿದ್ದೇವೆ ಎಂದು ಬೇಸರಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಡಾ.ವೀಣಾ, ಗೀತಾ ಕುಮಾರ್, ಸುಗುಣ ಪ್ರಭುದೇವ್, ಎನ್.ಅನಂತ, ಕಲ್ಮಳ್ಳಿ ನಟರಾಜು, ಟಿ.ಸುರೇಶ್, ಪಾರ್ಥಸಾರಥಿ, ದೊರೆಸ್ವಾಮಿ ಹಾಗೂ ಟಿ.ಎಂ.ಕಿಶೋರ್ ಅವರಿಗೆ ‘ಬಸವ ಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಂಡಳ್ಳಿ ದೊಡ್ಡಮಠದ ಡಾ.ಫಲಹಾರ ಪ್ರಭುದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕೋಶಾಧ್ಯಕ್ಷ ವರುಣ ಮಹೇಶ್, ಸಾಹಿತಿ ಡಾ.ಕೆ.ಲೀಲಾಪ್ರಕಾಶ್ ಇತರರು ಇದ್ದರು.