ಕಾವೇರಿ ನದಿ ದಡದಲ್ಲಿರುವ ಪುರಾತನ ಬಸವೇಶ್ವರ ಹಾಗೂ ಗಣಪತಿ ದೇವಾಲಯ. 
ಜಿಲ್ಲೆ

ಬಸವೇಶ್ವರ, ಗಣಪತಿ ಮಹಿಮೆ ಅಪಾರ

ಸಿದ್ದಾಪುರ: ದುಬಾರೆ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಹಾಗೂ ಗಣಪತಿ ದೇವಾಲಯ ಮನೆಮಾತಾಗಿದ್ದು, ಮಾವುತರು, ಅರಣ್ಯ ಇಲಾಖೆ ಹಾಗೂ ಭಕ್ತರ ಬೇಡಿಕೆ ಈಡೇರಿಸುವ ಪ್ರಮುಖ ಭಕ್ತಿ ಮತ್ತು ಶ್ರದ್ಧಾ ಕೇಂದ್ರವಾಗಿದೆ.

ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಪುಟ್ಟ ಗ್ರಾಮ ಕೊಡಗು ಜಿಲ್ಲೆಯ ಸಿದ್ದಾಪುರ-ಕುಶಾಲನಗರದ ಬಳಿ ಕಾವೇರಿ ನದಿಯ ದಡದಲ್ಲಿದೆ. ಈ ಗ್ರಾಮ ದುಬಾರೆ ಮೀಸಲು ರಕ್ಷಿತಾರಣ್ಯ ಪ್ರದೇಶದ ಒಂದು ಭಾಗ. ಇದು ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯಕ್ಕೆ ಸೇರಿದೆ.

ಹಿನ್ನೆಲೆ: ದುಬಾರೆ ಆನೆ ಶಿಬಿರಕ್ಕೂ, ಮೈಸೂರಿನ ರಾಜವಂಶಸ್ಥರಿಗೂ ಅವಿನಾಭಾವ ಸಂಬಂಧವಿದೆ. ಐತಿಹಾಸಿಕವಾಗಿ ದುಬಾರೆ ಮೈಸೂರಿನ ಹಿಂದಿನ ಮಹಾರಾಜರ ಆನೆ ಸೆರೆಹಿಡಿಯುವಿಕೆ ಮತ್ತು ತರಬೇತಿ ಶಿಬಿರವಾಗಿತ್ತು. ರಾಜರು ಮತ್ತು ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಮೈಸೂರು ದಸರಾ ಉತ್ಸವಕ್ಕಾಗಿ ಆನೆಗಳಿಗೆ ತರಬೇತಿ ನೀಡಲು ಶಿಬಿರವನ್ನು ಬಳಸಲಾಗುತ್ತಿತ್ತು. ಇಲ್ಲಿನ ಸ್ಥಳೀಯ ಬುಡಕಟ್ಟು ಜನರು ಆನೆಗಳಿಗೆ ತರಬೇತಿ ನೀಡುತ್ತಿದರು. ಅನಾದಿ ಕಾಲದಿಂದಲೂ ಆನೆಗಳನ್ನು ಸೆರೆಹಿಡಿಯುವ ಮತ್ತು ಪಳಗಿಸುವ ಸಂದರ್ಭ ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಂದಿನ ಕಾರ್ಯ ನಡೆಸುತ್ತಿದ್ದರು. ಈ ಆಚರಣೆ ಇಂದಿಗೂ ಮುಂದುವರಿದಿದೆ.

ಈ ದೇವಸ್ಥಾನದ ಸುತ್ತ ಪ್ರವಾಸಿಗರಿಗೆ ವಿಶಿಷ್ಟವಾದ ವನ್ಯಜೀವಿ ಅನುಭವ ನೀಡುತ್ತದೆ. ದೇವಾಲಯ ಸಮೀಪ ಆನೆ ಶಿಬಿರವಿದ್ದು, ಆನೆ ತರಬೇತಿ ಮತ್ತು ಸಂರಕ್ಷಣಾ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಪ್ರಕೃತಿ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಭೇಟಿ ನೀಡಲೇಬೇಕಾದ ತಾಣವಾಗಿದೆ. ಅನೇಕ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ನೆಲೆಯಾಗಿದೆ.

ಕಾಡಿನ ಮಕ್ಕಳು ಎಲ್ಲರೂ ಒಗ್ಗೂಡಿ ದೇವಸ್ಥಾನ ಬಳಿಯಿರುವ ಕಾವೇರಿ ನೀರಿನಲ್ಲಿ ಆನೆಗಳಿಗೆ ಜಳಕ ಮಾಡಿಸುವ ವಾಡಿಕೆ ಇಂದಿಗೂ ಇದೆ. ನಂತರ ಬಣ್ಣಗಳಿಂದ ಆನೆ ಮೇಲೆ ಚಿತ್ರಬಿಡಿಸಲಾಗುತ್ತದೆ. ಬಳಿಕ ಹೂ, ಹಾರ ಹಾಕಿ ದೊಡ್ಡ ಮತ್ತು ಮರಿ ಆನೆಗಳಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆನೆಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ನಾಡಹಬ್ಬ ದಸರಾ ಎಂದ ಕೂಡಲೇ ಸಂಭ್ರಮ ಎಲ್ಲರಲ್ಲೂ ಮನೆ ಮಾಡುತ್ತದೆ. ನಾಡದೇವಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಅಂಬಾರಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಆದರೆ ಇಲ್ಲಿ ಅಚ್ಚರಿಯ ವಿಚಾರ ಎಂದರೆ ದುಬಾರೆ ಸಾಕಾನೆ ಶಿಬಿರದಿಂದ ಗಜಪಡೆ ಪಯಣ ಬೆಳೆಸುವ ಸಂದರ್ಭ ದೇವಾಲಯದ ಪಕ್ಕದ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ಹೂವುಗಳಿಂದ ಸಿಂಗರಿಸಿ ಶಿಬಿರದಲ್ಲಿರುವ ಗಣೇಶ ಮೂರ್ತಿ ಹಾಗೂ ಬಸವೇಶ್ವರನಿಗೆ ಪೂಜೆ ಸಲ್ಲಿಸುವುದು ವಾಡಿಕೆ.

ಆನೆಗಳಿಗೆ ಪೂಜೆ ಸಲ್ಲಿಸುವ ಸಂದರ್ಭ ಹಣ್ಣು, ಕಾಯಿ ಇಟ್ಟು ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ. ಮಾವುತರ ಮುಖಂಡ ದೊರೆ ಸೇರಿದಂತೆ ಇತರರು ಆನೆಗಳಿಗೂ ಕುಂಕುಮ ಅಕ್ಷತೆ ಇಟ್ಟು ಹೂವು ಮುಡಿಸಿ ಬಳಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ಪೂಜೆ ಸಲ್ಲಿಕೆಯಾಗುತ್ತಿದ್ದಂತೆ ದಸರೆಗೆ ಹೊರಡುವ ಕೆಲವು ಆನೆಗಳು ಸೊಂಡಿಲನ್ನು ಮೇಲೆತ್ತಿ ವಿಘ್ನ ವಿನಾಯಕನಿಗೆ ನಮಸ್ಕರಿಸುವ ರೀತಿಯಲ್ಲಿ ನಿಲ್ಲುತ್ತವೆ. ಆನೆಗಳು ಸೊಂಡಿಲನ್ನು ಮೇಲೆತ್ತುತ್ತಿದ್ದಂತೆ ಅಲ್ಲಿ ನೆರೆದಿದ್ದ ಮಾವುತರು ಕವಾಡಿಗರು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ನೂರಾರು ಪ್ರವಾಸಿಗರು ಕೈಮುಗಿದು ವಂದಿಸುತ್ತಾರೆ. ಆನೆಗೆ ಬಾಳೆಹಣ್ಣು, ಬೆಲ್ಲ ತೆಂಗಿನ ಕಾಯಿ ಸೇರಿದಂತೆ ವಿವಿಧ ತಿನಿಸುಗಳು ನೀಡುತ್ತಾರೆ. ಬಳಿಕ ಆನೆಗಳು ಗಣೇಶ ಮೂರ್ತಿಯನ್ನು ಮೂರು ಸುತ್ತು ಸುತ್ತಿ ಮೈಸೂರಿನತ್ತ ಪ್ರಯಾಣ ಆರಂಭಿಸುತ್ತದೆ.

ತಲುಪುವ ಮಾರ್ಗ: ದುಬಾರೆ ಆನೆ ಶಿಬಿರವು ಬೆಂಗಳೂರಿನಿಂದ ಸುಮಾರು 240 ಕಿಮೀ ದೂರದಲ್ಲಿದೆ. ಮೈಸೂರಿನಿಂದ 90 ಕಿಮೀ ದೂರವಿದ್ದು, ಪ್ರವಾಸಿಗರು ಟ್ಯಾಕ್ಸಿ ಅಥವಾ ಬಸ್ ಮೂಲಕ ತಲುಪಬಹುದು. ಮಡಿಕೇರಿಯಿಂದ 37ಕಿ.ಮೀ. ವಿರಾಜಪೇಟೆಯಿಂದ 30 ಕಿ.ಮೀ.ದೂರವಿದೆ. ಶಿಬಿರವು ಉತ್ತಮ ರಸ್ತೆ ಸಂಪರ್ಕ ಹೊಂದಿದೆ ಮತ್ತು ಕರ್ನಾಟಕದ ವಿವಿಧ ನಗರಗಳಿಂದ ಸುಲಭವಾಗಿ ಪ್ರವೇಶಿಸಿ ದೇವರ ದರ್ಶನವನ್ನು ಪಡೆಯಬಹುದು

ಕೊಡಗಿನ ಪ್ರವಾಸಿ ತಾಣಗಳಲ್ಲಿ ಹೆಸರುವಾಸಿ ತಾಣವಾಗಿರುವ ದುಬಾರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಇಲ್ಲಿನ ಗಿರಿಜನರು ಅನಾದಿ ಕಾಲದಿಂದಲೂ ಕಾಡು ಹಾಗೂ ವನ್ಯಪ್ರಾಣಿಗಳೊಂದಿಗೆ ಬೆಳೆದು ಬಂದಿದ್ದಾರೆ. ಹಾಗಾಗಿ, ಈ ಪರಿಸರದ ಜತೆ ನಮಗೆ ನಂಟಿದೆ. ಇಲ್ಲಿಯ ಗಣಪತಿ ಹಾಗೂ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಶುಭ ಕಾರ್ಯಗಳನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ.
ಚಿನ್ನಪ್ಪ ದುಬಾರೆ ಹಾಡಿ ನಿವಾಸಿ

ಇಲ್ಲಿ ಗಿರಿಜನರು, ಜೇನು ಕುರುಬ ಸೇರಿದಂತೆ ವಿವಿಧ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮೂಲ ನಿವಾಸಿಗಳು ಹೆಚ್ಚು ವಾಸವಿದ್ದು ಇಂದಿಗೂ ದುಬಾರೆಯಲ್ಲಿ ಕಾಡಾನೆಗಳನ್ನು ಪಳಗಿಸುವ ಮೊದಲು ನಮ್ಮ ಇಷ್ಟ ದೈವವಾದ ಗಣಪತಿ, ಬಸವೇಶ್ವರ ದೇವರನ್ನು ಆರಾಧಿಸಿದ ಬಳಿಕ ತರಬೇತಿ ಆರಂಭಿಸುತ್ತೇವೆ.
ಡೋಬಿ ದುಬಾರೆ ಹಾಡಿ ನಿವಾಸಿ