ಜಿಲ್ಲೆ

ಬಸವೇಶ್ವರ ಸಾಂಸ್ಕೃತಿಕ ಅಭಿಯಾನಕ್ಕೆ ಚಾಲನೆ

ಕಿರಣ್ ಗೌಡ.ಜಿ

 ಹೊಳೆನರಸೀಪುರ: ಬಸವೇಶ್ವರ ಸಾಂಸ್ಕೃತಿಕ ಅಭಿಯಾನಕ್ಕೆ ಹಳೇಬೀಡು ಸಮೀಪದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಚಾಲನೆ ನೀಡಿದರು.

ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂದಿರದಲ್ಲಿ ಶನಿವಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಹಾಸನಾಂಬ ಕಲಾಕ್ಷೇತ್ರದಲ್ಲಿ ಸೆ.21 ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಪೂರ್ವಭಾವಿಯಾಗಿ ಅಭಿಯಾನದ ರಥಗಳು ತಾಲೂಕಿನಲ್ಲಿ ಸಂಚರಿಸಲಿದೆ. ವಿಶ್ವಗುರು ಜಗಜ್ಯೋತಿ ಬಸವೇಶ್ವರರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸರ್ಕಾರಕ್ಕೆ ಧನ್ಯವಾದ ತಿಳಿಸುವ ಜತೆಗೆ ಬಸವ ತತ್ವವನ್ನು ಜನರಿಗೆ ತಿಳಿಸಲು ಅಭಿಯಾನ ನಡೆಸಲಾಗುವುದು. ಇದರೊಂದಿಗೆ ಜಿಲ್ಲಾ ಹಂತದಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ರಾಜ್ಯದ ವಿವಿಧ ಮಠದ ಸ್ವಾಮೀಜಿಗಳು, ಸಮುದಾಯದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೋರಿದರು.

ಸಮಾಜದಲ್ಲಿ ಇತ್ತೀಚಿನ ವಿದ್ಯಮಾನದಲ್ಲಿ ಜಾತೀಯತೆ, ಅಸಮಾನತೆ ಹೆಚ್ಚುತ್ತಿದೆ. ಸಣ್ಣ ವಿಚಾರಗಳಿಗೂ ಗೊಂದಲ ಮೂಡಿಸಲಾಗುತ್ತಿದೆ. ಬಸವೇಶ್ವರ ಅಂದಿನ ಕಾಲದಲ್ಲಿಯೇ ಇಂತಹ ಸಾಮಾಜಿಕ ಪಿಡುಗುಗಳನ್ನು ಹತ್ತಿಕ್ಕಲು ಶ್ರಮಿಸಿದ್ದರು. ಇಂದು ಅವರ ತತ್ವವನ್ನು ಯುವಕರಿಗೆ ಬಿತ್ತುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಭಿಯಾನ ಸಹಕಾರಿಯಾಗಲಿದೆ ಎಂದು ಆಶಿಸಿದರು.

ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿ, ತಾಲೂಕಿನ ತೇಜೂರು ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣಸ್ವಾಮಿ ಸಾನಿಧ್ಯವಹಿಸಿದ್ದರು. ವೀರಶೈವ ಮುಖಂಡ ಜಯಣ್ಣ, ಸಾಹಿತಿ ಗುಂಜೇವು ಅಣ್ಣಾಜಪ್ಪ ಹಾಗೂ ವೀರಶೈವ ಮಹಿಳಾ ಜಿಲ್ಲಾ ಅಧ್ಯಕ್ಷೆ ಚಂದ್ರಮತಿ ಇದ್ದರು.