ವಿಜಯವಾಣಿ ಸುದ್ದಿಜಾಲ ಆನೇಕಲ್
ಮಾನವ ಧರ್ಮಕ್ಕೆ ಒಳಿತು ಮಾಡುವುದೇ ವೀರಶೈವ ಧರ್ಮದ ಗುರಿ ಎಂದು ಗುಮ್ಮಳಾಪುರ ಸಂಸ್ಥಾನ ಮಠದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮುತ್ತುಗಟ್ಟಿಯಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಾಸಭಾದಿಂದ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರಿಗೂ ಶುಭವಾಗಲಿ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಬೇಕು. ವೀರಶೈವ ಧರ್ಮದಲ್ಲಿನ ಆಚರಣೆಗಳನ್ನು ಪಾಲಿಸಬೇಕು. ಆ ಮೂಲಕ ಕುಟುಂಬದಲ್ಲಿ ಸಂಸ್ಕಾರ ನೀಡಬೇಕು. ಉತ್ತಮ ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕೋಲಾರದ ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಮತ್ತು ಜಗಜ್ಯೋತಿ ಬಸವೇಶ್ವರರ ತತ್ವ, ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಜೀವನವನ್ನು ಸ್ವಾರ್ಥಕ್ಕಾಗಿ ಸೀಮಿತಗೊಳಿಸಿಕೊಳ್ಳದೆ ಸಮಾಜಕ್ಕಾಗಿಯೂ ಮೀಸಲಿಡಬೇಕು ಎಂದರು.
ಜಗಜ್ಯೋತಿ ಬಸವೇಶ್ವರರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ನೂತನ ಸಂಸತ್ತಿನಲ್ಲಿ ಬಸವಣ್ಣನವರ ವಚನಗಳನ್ನು ಅಳವಡಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಹಿನ್ನಕ್ಕಿ ಜಯಣ್ಣ ಮಾತನಾಡಿ, ಸಮಾಜ ಸಂಘಟಿತವಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಹೋಬಳಿಗಳಲ್ಲಿ ಘಟಕಗಳನ್ನು ಸ್ಥಾಪಿಸಿ, ಈ ಮೂಲಕ ಗ್ರಾಮಗಳಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಸಂಘಟನೆ ಮಾಡಲು ಚಿಂತನೆ ಮಾಡಲಾಗಿದೆ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೀರಶೈವ ಲಿಂಗಾಯತ ಮಹಾಸಭಾದ ಮುತ್ತುಗಟ್ಟಿ ಗ್ರಾಮಶಾಖೆಯನ್ನು ಉದ್ಘಾಟಿಸಲಾಯಿತು.
ತಾಲೂಕು ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಜಯಣ್ಣ, ಪುರಸಭೆ ಸದಸ್ಯೆ ಭಾರತಿ ವಿರೂಪಾಕ್ಷಯ್ಯ, ಚಂದಾಪುರ ಪುರಸಭೆ ಸದಸ್ಯೆ ಭಾರತಿ ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕರೇವಣ್ಣ, ಸದಸ್ಯರಾದ ಅಂಬರೀಷ್, ಅಪ್ಪಣ್ಣಾಚಾರಿ, ಪುಷ್ಪಾ ಮಹಾಂತೇಶ್, ಅನಸೂಯಾ, ಶಸಾಪ ತಾಲೂಕು ಅಧ್ಯಕ್ಷ ಎಂ.ಶಿವಣ್ಣ, ಮುತ್ತುಗಟ್ಟಿ ಗ್ರಾಮಶಾಖೆ ಅಧ್ಯಕ್ಷ ಆರ್.ಬಸವರಾಜು, ಮಹಾಸಭಾದ ಮಾರ್ಗದರ್ಶಿಗಳಾದ ವಿಶಾಲಾ ಆರಾಧ್ಯ, ಮಮತಾ, ಮುಖಂಡರಾದ ರಾಜಾಪುರ ಎಸ್.ಮಹೇಶ್, ಎಸ್.ಆರ್.ಎಸ್.ಚಂದ್ರಶೇಖರ್, ಅರುಣ್ ಆರಾಧ್ಯ, ಆರ್.ಎಂ.ಆರಾಧ್ಯಾ, ರೇಣುಕಾ ಜಯಣ್ಣ, ಹೊಂಬದೇನಹಳ್ಳಿ ಚಂದ್ರಣ್ಣ, ಬಸವರಾಜು, ಹರೀಶ್ ಆರಾಧ್ಯ ಇದ್ದರು.