ದೇವದುರ್ಗ: ಪಾಕ್ ಉಗ್ರರ ನೆಲೆಗಳ ಮೇಲೆ ಮೇಲೆ ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಭದ್ರತೆ ಹೆಚ್ಚಿಸಿದ್ದು, ದಿನದ 24 ಗಂಟೆ ನಿಗಾವಹಿಸಲಾಗಿದೆ.
ರಾಜ್ಯದ ಮೂರನೇ ಅತಿದೊಡ್ಡ ಬಸವಸಾಗರ ಜಲಾಶಯ 492.252 ಮೀಟರ್ ಅಡಿ ಎತ್ತರ 33.313 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ಕೃಷಿ, ಕುಡಿವ ನೀರು ಸೇರಿ ವಿವಿಧ ಯೋಜನೆಗಳಡಿ ನೀರೊದಗಿಸುತ್ತಿದೆ. ಹೀಗಾಗಿ ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಜಲಾಶಯದ ಭದ್ರತೆ ಜವಾಬ್ದಾರಿ ವಹಿಸಿದ್ದಾರೆ.
ಜಲಾಶಯಕ್ಕೆ ದಿನದ 24 ಗಂಟೆಗಳ ಲಿಂಗಸುಗೂರಿನ ಶರಣಬಸವೇಶ್ವರ ಭದ್ರತಾ ಸಿಬ್ಬಂದಿ ಭದ್ರತೆ ಒದಗಿಸುತ್ತಿದ್ದಾರೆ. ಆದರೆ, ಗುರುವಾರ ಭಾರತೀಯ ಸೇನೆ ಪಾಕ್‌ನ ವಿವಿಧೆಡೆ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡೇಕಲ್ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಅಲ್ಲದೆ ಯಾದಗಿರಿ, ವಿಜಯಪುರ ಮತ್ತು ರಾಯಚೂರು ಪೊಲೀಸರು ಜಲಾಶಯದ ಪ್ರವೇಶ ದ್ವಾರ ಹಾಗೂ ಜಲಾಶಯದ ಮೇಲ್ಭಾಗದಲ್ಲಿ ಭದ್ರತೆ ಒದಗಿಸಿದ್ದಾರೆ. ಅಲ್ಲದೆ ಜಲಾಶಯಕ್ಕೆ ಬರುವ ಎಲ್ಲ ಮಾರ್ಗದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದು, ಲಿಂಗಸುಗೂರು ತಾಲೂಕಿನಲ್ಲೂ ತಾತ್ಕಾಲಿಕ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.
ಸದ್ಯ ಜಲಾಶಯದೊಳಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಮುಖ್ಯವಾಗಿ ಜಲಾಶಯದ ಮೇಲ್ಭಾಗದಲ್ಲಿ ನಿಗಮದ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೂ ಬಿಡುತ್ತಿಲ್ಲ. ಅಲ್ಲದೆ ಜಲಾಶಯ ಮುಂಭಾಗದಲ್ಲಿ ಸಂಚಾರ ಮಾಡುವ ವಾಹನಳ ಮೇಲೆಯೂ ಹದ್ದಿನಕಣ್ಣು ಇರಿಸಲಾಗಿದೆ. ಜಲಾಶಯಕ್ಕೆ ತೆರಳುವ ನಾರಾಯಣಪುರ ಹೊರವಲಯದ ಚೆಕ್‌ಪೋಸ್ಟ್‌ನಲ್ಲೂ ಭದ್ರತೆ ಹೆಚ್ಚಿಸಲಾಗಿದೆ.
ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಮೊದಲಿನಿಂದ ಬಿಗಿ ಭದ್ರತೆಯಿದೆ. ಸದ್ಯ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಹೆಚ್ಚುವರಿ ಭದ್ರತೆ ಒಗಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ. ಮೂರು ಜಿಲ್ಲೆಯ ಡಿಸಿ, ಎಸ್ಪಿಗಳು ಭದ್ರತೆ ಬಗ್ಗೆ ನಿಗಾಹಿಸಿದ್ದಾರೆ.
ಪ್ರೇಮ್‌ಸಿಂಗ್, ಎಇಇ, ನಾರಾಯಣಪುರ ಜಲಾಶಯ