ಕೃಷ್ಣಾ ನದಿಯಲ್ಲಿ ಪ್ರವಾಹ ಕಡಿಮೆಯಾಗಿದ್ದರಿಂದ ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತವಾಗಿರುವುದು. 
ಜಿಲ್ಲೆ

ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತ

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 76 ಸಾವಿರ ಕ್ಯೂಸೆಕ್ ನೀರು ಶನಿವಾರ ಬಿಡುಗಡೆ ಮಾಡಿದ್ದರಿಂದ ನದಿಯಲ್ಲಿ ಪ್ರವಾಹ ತಗ್ಗಿದ್ದು, ನಡುಗಡ್ಡೆ ಹಳ್ಳಿಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ತಗ್ಗಿದ ಕೃಷ್ಣಾನದಿ ಪ್ರವಾಹ

ಶುಕ್ರವಾರ ಜಲಾಶಯದಿಂದ ಕೃಷ್ಣಾ ನದಿಗೆ 1,57,500 ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಂಟಾಗಿ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿತ್ತು. ಇದರಿಂದ ತಾಲೂಕಿನ ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಜನತೆ ಜಲದುರ್ಗ ಮಾರ್ಗವಾಗಿ ತಾಲೂಕು ಕೇಂದ್ರಕ್ಕೆ 45 ಕಿಮೀ. ಸುತ್ತುವರಿದು ಬರುವ ಅನಿವಾರ್ಯತೆ ಎದುರಾಗಿತ್ತು. ಇದೀಗ 76,000 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದ್ದು, ನದಿಯಲ್ಲಿ ಪ್ರವಾಹ ಕಡಿಮೆಯಾಗಿದೆ.