ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಮಾದಲಗೆರೆ ಶ್ರೀ ಮಹದೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಬುಧವಾರ ರಾತ್ರಿ ಆಯೋಜಿಸಿದ್ದ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಸವರಾಜು ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು.
ಏಳು ಬುಡಕಟ್ಟು ಗ್ರಾಮಕ್ಕೆ ಒಳಪಡುವ ಚಿಕ್ಕೇನಹಳ್ಳಿ ಗ್ರಾಮಸ್ಥರ ನೇತೃತ್ವದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಜಿನ್ನೇನಹಳ್ಳಿ ತಂಡವು ದ್ವಿತೀಯ ಸ್ಥಾನ ಅಲಂಕರಿಸಿದರೆ, ಹಿರೀಸಾವೆ ತಂಡ ತೃತೀಯ ಸ್ಥಾನ ಗಳಿಸಿತು.
ಒಂದಕ್ಕಿಂತ ಒಂದು ತಂಡವು ಪೈಪೋಟಿ ನೀಡುವ ಮೂಲಕ ಭರ್ಜರಿ ಪ್ರದರ್ಶನದೊಂದಿಗೆ ಪ್ರೇಕ್ಷಕರಿಗೆ ರಸದೌತಣವನ್ನೇ ಉಣ ಬಡಿಸಿತು. ಎಂ.ಕೆ.ಹೊಸೂರು, ನುಗ್ಗೆಹಳ್ಳಿ, ಹಿರೀಸಾವೆ, ಕಾರೆಹಳ್ಳಿ, ಗುಂಗರಮಳೆ ಹಾಗೂ ಜಂಬೂರು ಸೇರಿದಂತೆ 16 ತಂಡಗಳು ಭಾಗವಹಿಸಿದ್ದವು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ 10,000 ರೂ. ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಅಲಂಕರಿಸಿದ ತಂಡಕ್ಕೆ 7,000 ರೂ. ನಗದು, ಟ್ರೋಫಿ ಹಾಗೂ ತೃತೀಯ ಸ್ಥಾನ ಗಳಿಸಿದ ತಂಡಕ್ಕೆ 4,000 ರೂ ಹಾಗೂ ಟ್ರೋಫಿ ನೀಡಲಾಯಿತು. ಇನ್ನು ಮೊದಲಗೆರೆ ತಂಡವು ಚತುರ್ಥ ಸ್ಥಾನಕ್ಕೆ ತೃಪ್ತಗೊಂಡಿದ್ದು, 2 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆಯಿತು.
ಜಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿನೇಶ್ ತಂಡಗಳಿಗೆ ಬಹುಮಾನ ವಿತರಿಸಿದರು. ಗುತ್ತಿಗೆದಾರ ಟಿ.ಪಿ.ಮಂಜು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸೋಸಲಗೆರೆ ನವೀನ್, ಮಾನವ ಹಕ್ಕುಗಳ ಸೇವಾ ಸಮಿತಿಯ ತಾಲೂಕು ಕಾರ್ಯದರ್ಶಿ ಎಂ.ಜೆ.ನಂಜೇಗೌಡ, ಹಿರಿಯ ವಾಲಿಬಾಲ್ ಆಟಗಾರ ನಿಂಬೇಹಳ್ಳಿ ಗೋಪಿ, ಪ್ರಮುಖರಾದ ಹೊಸೂರು ಹರೀಶ್ ಇತರರು ಹಾಜರಿದ್ದರು.