ಗದಗ: ಶತಮಾನದಿಂದ ಕನ್ನಡ ನಾಡಿನಲ್ಲಿ ಪ್ರಕಾಶನ ಹಾಗೂ ಮುದ್ರಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಸರೆಂದರೆ ಗದಗ್ನ ಪಿ.ಸಿ. ಶಾಬಾದಿಮಠ ಬುಕ್ ಡಿಪೋ. ಈ ಸಂಸ್ಥೆಯನ್ನು ನಾಡಿನಾದ್ಯಂತ ಮನೆಮಾತಾಗಿಸಿದವರು, ಮುದ್ರಣ ಭಾಸ್ಕರ ಪ್ರಶಸ್ತಿ ಪುರಸ್ಕೃತ ಉದ್ಯಮಿ ಚಂದ್ರಶೇಖರಯ್ಯ ಬಸವರಾಜ ಶಿವಯ್ಯ ಶಾಬಾದಿಮಠ (76) ನಿಧನ ಹೊಂದಿದ್ದಾರೆ.
ಬಸವರಾಜ ಅವರ ಅಜ್ಜ ಪಶುಪತಯ್ಯ 1925ರಲ್ಲಿಯೇ ಶಾಬಾದಿಮಠ ಪುಸ್ತಕದ ಮಳಿಗೆ ಆರಂಭಿಸಿದ್ದರು. ಬಸವರಾಜರು 1950ರಲ್ಲಿ ಮುದ್ರಣ ರಂಗಕ್ಕೆ ಕಾಲಿಟ್ಟರು. ಸತತ ಏಳು ದಶಕಗಳ ಕಾಲ ಬುಕ್ ಡಿಪೋದ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಶಾಬಾದಿಮಠ ಬುಕ್ ಡಿಪೋದಿಂದ ಕ್ಯಾಲೆಂಡರ್, ಪಂಚಾಂಗ, ಅಂಕಲಿಪಿ, ನೋಟ್ಬುಕ್, ಡಿಕ್ಷನರಿ, ಡೈರಿಗಳು, ವಾಲ್ ಪೋಸ್ಟರ್, ಆಮಂತ್ರಣ ಪತ್ರಿಕೆ, ಹ್ಯಾಂಡ್ಬಿಲ್, ಧಾರ್ವಿುaಕ ಪುಸ್ತಕಗಳು, ನಾಟಕಗಳು, ಕತೆ-ಕಾದಂಬರಿ ಹೀಗೆ ಎಲ್ಲ ಪ್ರಕಾರದ ಮುದ್ರಣ ಸೇವೆಗಳೂ ನಡೆದಿವೆ.
ಶಾಬಾದಿಮಠ ಪಂಚಾಂಗ ಮತ್ತು ಕ್ಯಾಲೆಂಡರ್ ಉತ್ತರ ಕರ್ನಾಟಕ ಭಾಗದ ಪ್ರತಿ ಮನೆಯಲ್ಲಿ ಇರಲೇಬೇಕು ಎಂಬಷ್ಟರ ಮಟ್ಟಿಗೆ ಖ್ಯಾತಿ ಪಡೆದಿವೆ. ಅಜ್ಜ ಆರಂಭಿಸಿಕೊಟ್ಟ ಮುದ್ರಣ ಉದ್ಯಮವನ್ನು ಇಷ್ಟರ ಮಟ್ಟಿಗೆ ಬೆಳೆಸಿದವರೇ ಬಸವರಾಜ ಶಾಬಾದಿಮಠ. ಸೌಮ್ಯ ಸ್ವಭಾವದ ಬಸವರಾಜರು ತಮ್ಮ ಉದ್ಯಮದೊಂದಿಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪಂಚಪೀಠಗಳ ಪರಮ ಭಕ್ತರಾಗಿದ್ದರು. ಬೆಟಗೇರಿಯಲ್ಲಿ ನಿರ್ವಿುಸಿರುವ ರೇಣುಕಾಚಾರ್ಯ ಸಮುದಾಯ ಭವನದ ಕಾರ್ಯಾಧ್ಯಕ್ಷರಾಗಿದ್ದರು. ಅವರು ಎಂದೂ ಪ್ರಚಾರ ಬಯಸಿ ಹೋದವರಲ್ಲ. ಕಾಯಕದಲ್ಲಿಯೇ ಕೈಲಾಸ ಕಂಡವರು. ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿದವರು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವಂತಹ ಕಾರ್ವಿುಕರ ಕಷ್ಟಗಳಿಗೆ ಸ್ಪಂದಿಸುವಂತಹ ಭಾವನಾ ಜೀವಿಯಾಗಿದ್ದ ಅವರಿಗೆ ಕಾಶಿ ಶ್ರೀ ಚಂದ್ರಶೇಖರ ಪಂಡಿತಾರಾಧ್ಯ ಜಗದ್ಗುರುಗಳು ಮುದ್ರಣ ಭಾಸ್ಕರ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಸಂತಾಪ: ಬಸವರಾಜ ಶಾಬಾದಿಮಠ ಅವರ ನಿಧನಕ್ಕೆ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಉದ್ಯಮಿಗಳಾದ ದಯಾನಂದ ಸಂಕೇಶ್ವರ, ಮೃತ್ಯುಂಜಯ ಸಂಕೇಶ್ವರ, ಮಲ್ಲಿಕಾರ್ಜುನ ಸಂಕೇಶ್ವರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಸವರಾಜ ಶಾಬಾದಿಮಠ ಅವರ ಕಾರ್ಯಕ್ಷಮತೆಯಿಂದ ಶಾಬಾದಿಮಠ ಪ್ರೆಸ್ ನಾಡಿನಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಅವರ ಅಗಲಿಕೆ ಅತೀವ ದುಃಖ ತಂದಿದೆ ಎಂದು ತಿಳಿಸಿದ್ದಾರೆ.