ಜಿಲ್ಲೆ

ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಚಮತ್ಕಾರ: ಸಿಎಂ ಬೊಮ್ಮಾಯಿ ಟ್ವೀಟ್​ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ವಂದೇ ಭಾರತ್ ಎಕ್ಸ್​ಪ್ರೆಸ್ ಹಾಗೂ ಮೈಸೂರು-ಬೆಂಗಳೂರು ದಶಪಥ ರಸ್ತೆಯ ವಿಡಿಯೋಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಒಂದೇ ಫ್ರೇಮ್​ನಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್ ಹಾಗೂ ಮೈಸೂರು-ಬೆಂಗಳೂರು ದಶಪಥ ರಸ್ತೆಯ ಅದ್ಭುತ ದೃಶ್ಯ. ಈ ದೃಶ್ಯವು ಕರ್ನಾಟಕದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಹಾಗೂ ಅಭಿವೃದ್ಧಿಯನ್ನು ಸಾರುತ್ತದೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರವು ರಾಜ್ಯದಲ್ಲಿ ಚಮತ್ಕಾರ ಮಾಡಿದೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್​ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.

ಸಿಎಂ ಬೊಮ್ಮಾಯಿ ಅವರ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ನಮ್ಮ ಜನ ಅತ್ಯುತ್ತಮ ಮೂಲಸೌಕರ್ಯಕ್ಕೆ ಅರ್ಹರಿದ್ದಾರೆ. ಅದನ್ನು ಒದಗಿಸಲು ನಮ್ಮ ಸರ್ಕಾರ ಯಾವಾಗಲೂ ಶ್ರಮಿಸುತ್ತದೆ. ಮೂಲಸೌಕರ್ಯ ಸೃಷ್ಟಿಯಲ್ಲಿನ ನಮ್ಮ ದಾಪುಗಾಲು ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿದೆ ಎಂದು ಪ್ರಧಾನಿ ಹೇಳಿದ್ದಾರೆ.