ಬಸವಾಪಟ್ಟಣ: ಕೋಟೆಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 47,82,247 ರೂ. ಕಂದಾಯ ಬಾಕಿ ಇದ್ದು, ಸಕಾಲದಲ್ಲಿ ಕಂದಾಯ ಪಾವತಿಸಿ, ಪಂಚಾಯಿತಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಪಂಚಾಯಿತಿ ಕಾರ್ಯದರ್ಶಿ ಎಂ.ಜಿ.ಭೈರಪ್ಪ ತಿಳಿಸಿದರು.
ಸಮೀಪದ ಹರೋಸಾಗರದಲ್ಲಿ ಮಂಗಳವಾರ ಕೋಟೆಹಾಳ್ ಗ್ರಾಮ ಪಂಚಾಯಿತಿ ಹಮ್ಮಿಕೊಂಡಿದ್ದ ಕಂದಾಯ ವಸೂಲಾತಿ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಕೋಟೆಹಾಳ್ ಗ್ರಾಪಂ ವ್ಯಾಪ್ತಿಗೆ ಹರೋಸಾಗರ, ಸಂಗಾಹಳ್ಳಿ, ಮರಬನಹಳ್ಳಿ, ಹರಲೀಪುರ ಗ್ರಾಮಗಳು ಒಳಪಡುತ್ತವೆ. ಈ ಐದು ಗ್ರಾಮಗಳ ನಾಗರಿಕರು ಮನೆ, ನಿವೇಶನ, ನೀರು ಕಂದಾಯ ಪಾವತಿಸಿ ಸಹಕರಿಸುವಂತೆ ಮನವಿ ಮಾಡಿದರು.
ಕಂದಾಯ ಪಾವತಿಸಿ ಕರ್ತವ್ಯ ಪಾಲಿಸಿ, ಕರ ಪಾವತಿಸಿ ಮೂಲಸೌಕರ್ಯ ಪಡೆಯಿರಿ, ಕಂದಾಯ ಪಾವತಿಸುವುದು ನಾಗರಿಕರ ಹಕ್ಕು ಮತ್ತು ಕರ್ತವ್ಯ ಹಾಗೂ ನೀರನ್ನು ಮಿತವಾಗಿ ಬಳಸಿ ಎಂಬಿತ್ಯಾದಿ ಘೋಷ ವಾಕ್ಯದೊಂದಿಗೆ ಗ್ರಾಪಂ ಸದಸ್ಯರು, ಸಿಬ್ಬಂದಿ ಅಂದೋಲನ ನಡೆಸಿದರು.
ಕರ ವಸೂಲಿಗಾರ ರವಿಕುಮಾರ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಶೋಕ್, ನೀರಗಂಟಿ ಬಸಣ್ಣ, ವ್ಯಾಪಾರಿ ಬಸಣ್ಣ, ಸ್ವಾಮಿ ಇತರರಿದ್ದರು.