ಜಿಲ್ಲೆ

ಕಾಮಗಾರಿಗಳು ಗುಣಮಟ್ಟದ್ದಾಗಿರಲಿ

Davangere - Desk - Shobha Krishna Gowda

ಮಾಯಕೊಂಡ: ಸಿಸಿ ರಸ್ತೆಗಳು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು. ಒಂದು ವೇಳೆ ಕಳಪೆಯಾಗಿದ್ದರೆ ನಾನು ಸಹಿಸುವುದಿಲ್ಲ ಎಂದು ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಶಾಸಕ ಕೆ.ಎಸ್. ಬಸವಂತಪ್ಪ ಎಚ್ಚರಿಸಿದರು.

ಮಾಯಕೊಂಡ ಸಮೀಪದ ಅಣಜಿ ಹಾಗೂ ಅಣಬೇರು ಗ್ರಾಮಗಳಲ್ಲಿ ಮಂಗಳವಾರ ಸಿಸಿ ರಸ್ತೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರು, ಸಿಸಿ ರಸ್ತೆಗಳು, ಸಮರ್ಪಕ ಚರಂಡಿ ವ್ಯವಸ್ಥೆ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ಹಂತ ಹಂತವಾಗಿ ಅನುದಾನದ ಮೂಲಕ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಅಣಜಿ ಗ್ರಾಮದಲ್ಲಿರುವ ಚಿಕ್ಕಕೆರೆಯಲ್ಲಿ ನೀರು ಸೋರಿಕೆಯಾಗಿ ಅಕ್ಕಪಕ್ಕದ ಜಮೀನುಗಳು ಹಾಳಾಗುವುದನ್ನು ತಪ್ಪಿಸಲು 1 ಕೋಟಿ ಅನುದಾನದಲ್ಲಿ ಏರಿ, ಕೆರೆಯ ಅಂಗಳ ಸೇರಿ ಚಿಕ್ಕ ಕೆರೆಯ ಸಮಗ್ರ ಅಭಿವೃದ್ಧಿ, ಅಲ್ಪಸಂಖ್ಯಾತ ಇಲಾಖೆಯಿಂದ ಮಂಜೂರಾಗಿರುವ 50 ಲಕ್ಷ ರೂ. ಹಣದಿಂದ ಸಿಸಿ ರಸ್ತೆ ನಿರ್ಮಾಣ ಹಾಗೂ ಅಣಬೇರು ಗ್ರಾಮದಲ್ಲಿ ಅಲ್ಪಸಂಖ್ಯಾತ ಇಲಾಖೆಯ 20 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಣಬೇರು ಗ್ರಾಪಂ ಅಧ್ಯಕ್ಷ ಓಂಕಾರಪ್ಪ, ಸದಸ್ಯ ಜಿ.ಎಂ. ಅನಿಲ್​ಕುಮಾರ್, ರಾಜಪ್ಪ ಮಹದೇವಪ್ಪ, ಎ.ಕೆ ರುದ್ರಪ್ಪ, ಜಾಫರ್ ಷರೀಫ್, ಜಿಕ್ರಿಯಾ ಸಾಬ್, ನಾದಾರ್ ಖಾನ್, ಪಿಡಿಒ ವಿದ್ಯಾವತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಣ್ಣ, ಮುಖಂಡರಾದ ರಾಜಣ್ಣ, ಶೇರ್ ಅಲಿ ಸಾಬ್, ಗೌಸ್​ಸಾಬ್, ದಸ್ತಗಿರಿ ಸಾಬ್, ಬಸವಲಿಂಗಪ್ಪ ದೇವೇಂದ್ರಪ್ಪ, ಪರಮೇಶಪ್ಪ, ಲೋಕೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.