ಮೈಸೂರು: ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಮೈಸೂರು ಅರಸರ ಪರಂಪರೆಯೂ ಅನುಸರಿಸಿಕೊಂಡು ಜನಪರ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಿದೆ. ಅದೇ ಪರಂಪರೆಯನ್ನು ಸಂಸದರಾಗಿ ನಾವು ಮುಂದುವರಿಸಿಕೊಂಡು ಹೋಗುವುದಾಗಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು ಶರಣ ಮಂಡಳಿಯಿಂದ ಬುಧವಾರ ನಟರಾಜ ಸಭಾಭವನದಲ್ಲಿ ಆಯೋಜಿಸಿದ್ದ ಬಸವ ಜಯಂತಿ, ಬಸವರತ್ನ ಪ್ರಶಸ್ತಿ ಪ್ರದಾನ ಹಾಗೂ ವಾಟಾಳು ಶ್ರೀಗಳ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಗುರು ಬಸವಣ್ಣನ ವಚನಗಳನ್ನು ಪಾಲಿಸಿದರೆ ಈ ಭೂಮಿಯೇ ಸ್ವರ್ಗವಾಗುತ್ತದೆ. ಅವರ ಕಾಯಕ ತತ್ವವನ್ನು ನಮ್ಮ ಮೈಸೂರು ಪರಂಪರೆಯ ರಾಜರು ಪಾಲಿಸಿಕೊಂಡು ಬಂದಿದ್ದರು. ಇದರಿಂದ ಇತರ ರಾಜ್ಯಗಳಿಗಿಂತ ಮೈಸೂರು ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.
ಈಗ ಹಿಂದಿನ ಪರಂಪರೆಗೂ ಧಕ್ಕೆಯಾಗದ ರೀತಿ, ಮುಂದಿನ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಾ ಜತೆಗೆ ಮೈಸೂರು ಮೈಸೂರಾಗಿಯೇ ಇರುವಂತೆ ನೋಡಿಕೊಳ್ಳುವ ಗುರುತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ವಚನಕಾರರು ಭಾರತೀಯ ಪರಂಪರೆಯಲ್ಲಿ, ತತ್ವಶಾಸ್ತ್ರದಲ್ಲಿ ಇರುವ ವಿಷಯಗಳನ್ನು ಸಾಮಾನ್ಯರಿಗೂ ತಿಳಿಯುವಂತೆ ಆಡುಭಾಷೆಯಲ್ಲಿ ವಚನಗಳನ್ನು ಬರೆದಿದ್ದಾರೆ. ದೇವಲೋಕ, ಮರ್ತ್ಯಲೋಕ ಎಂಬುದು ಇಲ್ಲ. ಆಚಾರವೇ ಸ್ವರ್ಗ, ಅನಾಚರವೇ ನರಕ ಎಂದು ಸರಳವಾಗಿ ಎರಡು ಸಾಲಿನಲ್ಲಿ ಜೀವನವನ್ನು ತಿಳಿಸಿದ್ದಾರೆ ಎಂದು ಹೇಳಿದರು.
ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ , ಅಧ್ಯಾತ್ಮದ ಮೂಲಕ ಸರ್ವರಲ್ಲೂ ಸಮಾನತೆ, ಶಾಂತಿಯನ್ನು ಬೋಧಿಸಬೇಕಾಗಿರುವ ದೇವಾಲಯಗಳು ಪ್ರಸ್ತುತ ವ್ಯಾಪಾರಿ ಕೇಂದ್ರಗಳಾಗಿವೆ. ಸಂಪಾದನೆಯ ಪೈಪೋಟಿಯಲ್ಲಿ ಸಾಮಾಜಿಕ ಕೆಲಸವನ್ನೇ ಮರೆತುಬಿಟ್ಟಿವೆ. ಹಿರಿಯರು, ಆಳುವವರೂ ಕೂಡ ಸ್ವಾರ್ಥಕ್ಕಾಗಿ ಪರಿವರ್ತನೆಯಾಗಿರುವುದು ದುರ್ದೈವದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವಾದಿ ಶರಣರ ಒಂದೊಂದು ವಚನ ಬದುಕಿಗೆ ದೀವಟಿಗೆ ಇದ್ದಂತೆ. ಜೀವನದಲ್ಲಿ ಬರುವ ಕತ್ತಲನ್ನು ಓಡಿಸುವ ಬೆಳಕು. ಆದರೆ ಇಂದಿನ ದಿನಮಾನದಲ್ಲಿ ವಚನಗಳನ್ನು ಪಾಲಿಸುತ್ತಿಲ್ಲ. ಯುವ ಜನರು ಯಾವ ರೀತಿ ಮೋಸ, ಕಪಟ, ವಂಚನೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರ ಮೇಲೆ ಶೋಷಣೆ ಯಾವ ರೀತಿ ನಡೆಯುತ್ತಿದೆ. ಇವುಗಳು ಸಮಾಜಕ್ಕೆ ಯಾವ ಸಂದೇಶವನ್ನು ಕೊಡುತ್ತಿವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವು ಇದ್ದೇವೆ ಎಂದು ಹೇಳಿದರು.
ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ‘ಬಸವರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿ, ಗುರುವಂದನೆ ಸಲ್ಲಿಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪ್ರೊ.ಎಂ.ಕೋಮಲಾ, ಎಚ್.ಜಿ.ಪವಿತ್ರಾ, ಜೆ.ಬಾಪೂಜಿ, ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಐಎಫ್‌ಎಸ್ ಅಧಿಕಾರಿ ಆರ್.ರಾಜು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎಪಿಎನ್ ನಾಗೇಶ್, ಶರಣ ಮಂಡಳಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಉಪಾಧ್ಯಕ್ಷ ಎ.ಸಿ.ಜಗದೀಶ್, ಗೌರವಾಧ್ಯಕ್ಷ ಯು.ಎಸ್.ಶೇಖರ್ ಇತರರು ಇದ್ದರು.