ಹೊಸದುರ್ಗ; 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪನೆ ಮೂಲಕ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಪರಿಕಲ್ಪನೆಯನ್ನು ಜಾರಿಗೊಳಿಸಿದ ವಿಶ್ವಗುರು ಬಸವಣ್ಣನ ಚಿಂತನೆಗಳು ಜಗತ್ತಿಗೆ ಪಸರಿಸಬೇಕಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಶರಣ ಸಂಕುಲ ಸೇವಾ ಮಂಡಳಿ ಹಾಗೂ ಮುಂಬಯಿ ಕನ್ನಡ ಕಲಾ ಕೇಂದ್ರವು ಮಹಾರಾಷ್ಟ್ರದ ನವಿ ಮುಂಬಯಿಯ ಮರಾಠಿ ಸಾಹಿತ್ಯ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ತುಮಾರೆ ಸಿವಾ ಔರ್ ಕೋಯಿ ನಹೀ ವಚನ ಸಂಸ್ಕೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಶೋಷಿತ ವರ್ಗದ ಜನರನ್ನು ಹತ್ತಿರ ಕರೆದುಕೊಂಡು ಅವರ ಭುಜ ತಟ್ಟಿ ಎಲ್ಲರಿಗೂ ಸಮಾನವಾಗಿ ಮೇಲೆ ಬರುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟರು. ದಲಿತ ವರ್ಗದ ಮಹಿಳೆಯರನ್ನು ಕೇವಲ ಭೋಗದ ವಸ್ತುವಾಗಿ ಕಾಣುತ್ತಿದ್ದ ಅಂದಿನ ಸಂದರ್ಭದಲ್ಲಿ ಅಂತಹ ಮಹಿಳೆಯರಿಗೆ ವಿಶೇಷ ಸ್ಥಾನ ಕಲ್ಪಿಸಿದರು ಎಂದರು.
ಪ್ರಧಾನಿ ನರೇಂದ್ರ ಮೋದಿ ಬಸವಣ್ಣನ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. ನಾವೆಲ್ಲ ಬಸವಣ್ಣ ಅಂತ ಕರೆದರೆ ಮೋದಿ ಜಗದ್ಗುರು ಬಸವಣ್ಣ ಎಂದು ಸಂಭೋದಿಸುತ್ತಾರೆ. ಬಸವಣ್ಣ ಸಂನ್ಯಾಸಿಯಲ್ಲ, ಅವರು ಸಂಸಾರಿ. ಯಾವುದೇ ಮಠವನ್ನು ಕಟ್ಟಿದವರಲ್ಲ. ಅದರೂ ಅವರು ಮಾಡಿದ ಸಮಾಜಮುಖಿ ಕಾರ್ಯಗಳಿಂದ ವಿಶ್ವಗುರು, ಜಗದ್ಗುರು ಎನ್ನುವ ಗೌರವ ದೊರೆತಿದೆ ಎಂದು ಹೇಳಿದರು.
ಬಸವಣ್ಣನ ವಚನಗಳನ್ನು ಹಿಂದಿಗೆ ಭಾಷಾಂತರಿಸಿದ ವಿಜ್ಞಾನಿ ಡಾ.ಕುಲವಂತ ಸಿಂಗ್, ಸಾಹಿತಿ ಸುರೇಶ್ ರಾವ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಕಲಾವಿದರು ‘ತುಮಾರೆ ಸಿವಾ ಔರ್ ಕೋಯಿ ನಹೀ’ ವಚನ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು.
ರಂಗ ಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ, ಕೆ.ಆರ್.ಉಮಾಪತಿ, ಟಿ.ಆರ್.ಮಧುಸೂಧನ್, ಎಚ್.ವಿಶ್ವನಾಥ್, ಮಹಂತಶೆಟ್ಟರ್ ಮತ್ತಿತರಿದ್ದರು.