ಜಿಲ್ಲೆ

ಬಸವಣ್ಣ ಸ್ತ್ರೀ ಸಮಾನತೆಗೆ ಶ್ರಮಿಸಿದ್ದ ನಾಯಕ

ಕಿರಣ್ ಗೌಡ.ಜಿ

ಮಳವಳ್ಳಿ: ತಾಲೂಕು ಆಡಳಿತ ಸೇರಿದಂತೆ ಪಟ್ಟಣದ ಸರ್ಕಾರಿ ಕಚೇರಿಗಳು ಹಾಗೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬುಧವಾರ ವಿಶ್ವಗುರು ಬಸವೇಶ್ವರ ಜಯಂತಿ ಆಚರಣೆ ಮಾಡಲಾಯಿತು.

ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 892ನೇ ಶ್ರೀಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಹಲವು ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಆಚರಿಸಲಾಯಿತು. ಪಟ್ಟಣದ ತಾಲೂಕು ಪಂಚಾಯಿತಿ ಬಳಿ ಬೆಳ್ಳಿ ಸಾರೋಟಿನಲ್ಲಿ ಬಸವೇಶ್ವರ ಪುತ್ಥಳಿ ಇರಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಿವಿಧ ಜನಪದ ಕಲಾತಂಡಗಳು ಹಾಗೂ ತಮಟೆ, ನಗಾರಿ ಮತ್ತು ಮಂಗಳವಾದ್ಯದ ಜತೆಗೆ ನೂರಾರು ಸಂಖ್ಯೆಯಲ್ಲಿ ಬಸವೇಶ್ವರರ ಅನುಯಾಯಿಗಳು ಮೆರವಣಿಗೆಯಲ್ಲಿ ಸಾಗಿದರು.

ನಂತರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸಿ ಮಾತನಾಡಿದರು. ಸ್ತ್ರೀ ಸಮಾನತೆಯನ್ನು ಜಾರಿಗೆ ತಂದ ಮೊದಲ ವಿಶ್ವ ನಾಯಕ ಜಗಜ್ಯೋತಿ ಬಸವಣ್ಣನವರು ಎಂದ ಅವರು, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮೂಢನಂಬಿಕೆ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವ ಮೂಲಕ ಸಾಮಾಜಿಕ ಪರಿವರ್ತನಾ ಚಳವಳಿಯನ್ನು ನಡೆಸಿದ್ದರು. ಬಸವಣ್ಣ ತಮ್ಮ ವಚನಗಳಲ್ಲಿ ಸಮಾಜದ ಅಂಕುಡೊಂಕನ್ನು ತಿದ್ದುವ ಕೆಲಸವನ್ನು ಮಾಡಿದರು ಎಂದು ಸ್ಮರಿಸಿದರು.

ಅವತ್ತಿನ ಕಾಲಘಟ್ಟದಲ್ಲಿ ಇದ್ದಂತಹ ಮೂಢನಂಬಿಕೆ, ಜಾತಿವ್ಯವಸ್ಥೆ, ಅಸಮಾನತೆ ವಿರುದ್ಧ ಸಮರ ಸಾರುವ ಮೂಲಕ ಎಲ್ಲರೂ ನಮ್ಮವರೇ ಎಂದು ಲಿಂಗಧಾರಣೆ ಮಾಡುವುದರ ಜತೆಗೆ ಅಂತರ್ಜಾತಿ ವಿವಾಹಗಳನ್ನು ನಡೆಸುದರ ಮೂಲಕ ಕಲ್ಯಾಣ ಕ್ರಾಂತಿಯನ್ನು ಮಾಡಿದರು. ಜಗತ್ತಿನಲ್ಲಿ ಭಗವಾನ್ ಬುದ್ಧ, ಬಸವ, ಡಾ.ಅಂಬೇಡ್ಕರ್ ಸಮಾನತೆಯನ್ನು ಸಾರಿದಂತಹ ಮಹಾನ್ ನಾಯಕರು ಎಂದರು.

ಹಲವಾರ ಮಠಾಧ್ಯಕ್ಷ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಅವರು ವಿಶ್ವಗುರು ಬಸವೇಶ್ವರ ಬಗ್ಗೆ ಪ್ರವಚನ ನೀಡಿದರು. ಕಾರ್ಯಕ್ರಮದ ನಂತರ ನೆರೆದ ಸಮೂಹಕ್ಕೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಲೋಕೇಶ್, ತಾಪಂ ಇಒ ಶ್ರೀನಿವಾಸ್, ಡಿವೈಎಸ್‌ಪಿ ಕೃಷ್ಣಪ್ಪ, ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮೂರ್ತಿ, ಬಸವಕೇಂದ್ರ ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ, ಜಿಪಂ ಮಾಜಿ ಸದಸ್ಯರಾದ ಸುಷ್ಮಾ ರಾಜು, ಸುಜಾತಾ ಪುಟ್ಟು, ಮುಖಂಡರಾದ ಕುಂದೂರು ಪ್ರಕಾಶ್, ಮುಟ್ಟನಹಳ್ಳಿ ಅಂಬರೀಶ್, ಕ್ಯಾತನಹಳ್ಳಿ ಅಶೋಕ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.