ಬೆಳಗಾವಿ ನಗರದ ಶಹಾಪುರದಲ್ಲಿ ಸೋಮವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಕೋರೆ ಅವರನ್ನು ಗುರುಸಿದ್ದ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಸನ್ಮಾನಿಸಿದರು. ಡಾ.ಸಿ.ಎಂ.ಕುಂದಗೋಳ, ಚಂದ್ರಶೇಖರ ಬೆಂಬಳಗಿ ಇತರರಿದ್ದರು. 
ಜಿಲ್ಲೆ

ಬಸವಣ್ಣನ ವಿಚಾರ ಸಾರ್ವಕಾಲಿಕ

ಶಂಕರ ಗೆಜ್ಜಿ

ಬೆಳಗಾವಿ: ಮಹಾಮಾನವತಾವಾದಿ ಬಸವಣ್ಣನವರ ವಿಚಾರಗಳು ಎಲ್ಲ ಕಾಲಕ್ಕೂ ಮೌಲಿಕವೆನಿಸಿದ್ದು, ಅವು ಜೀವನದ ಭಾಗವಾಗಬೇಕಿದೆ. ಜೀವನ ಪಥ ಬದಲಾಯಿಸುವ ಶಕ್ತಿ ಬಸವಣ್ಣನವರ ವಚನಗಳಲ್ಲಿ ಅಡಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದ ಶಹಾಪುರದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮುರಗೋಡ ಮಹಾಂತ ಶಿವಯೋಗಿ ಶತಮಾನೋತ್ಸವ ಸ್ಮಾರಕ ಬಸವೇಶ್ವರ ಪೀಠ ಹಾಗೂ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂದಿರ ಟ್ರಸ್ಟ್, ಶಹಾಪುರ ದಾನಮ್ಮದೇವಿ ಮಂದಿರ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಬಸವ ವಾಹಿನಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶತಮಾನಗಳವರೆಗೆ ನಾವು ಬಸವಣ್ಣನವರನ್ನು ರಾಜ್ಯದ ಆಚೆಗೆ ಬಿಟ್ಟುಕೊಡಲಿಲ್ಲ. ಇಂದು ಅವರ ಸಂದೇಶಗಳು ವಿಶ್ವಮಾನ್ಯವೆನಿಸಿವೆ ಫ.ಗು.ಹಳಕಟ್ಟಿ ಅವರಂತಹ ಪ್ರಾತಃಸ್ಮರಣೀಯರಿಂದ ವಚನ ಸಾಹಿತ್ಯ ಬೆಳಕು ಕಂಡಿತು. ಇಲ್ಲದಿದ್ದರೆ ವಚನಗಳನ್ನು ಅಭ್ಯಸಿಸಲು ಸಾಧ್ಯವಾಗುತ್ತಿರಲಿಲ್ಲ. ಧಾರವಾಡದ ಬಸವಪೀಠಕ್ಕೆ ಎಸ್.ವಿ.ಬೆಂಬಳಗಿ ಅವರ ಕೊಡುಗೆ ಅಪಾರವಾಗಿದೆ ಎಂದರು.

ವಿದ್ವಾಂಸ ಡಾ.ವಿ.ಎಸ್.ಮಾಳಿ ಮಾತನಾಡಿ, ಮತ, ಮೌಢ್ಯ, ಅಜ್ಞಾನ ತೊಳೆದು ನಮ್ಮ ಆತ್ಮಹೃದಯದಲ್ಲಿ ಭಕ್ತಿಜ್ಞಾನ ಸುಜಲ ತುಂಬಿದವರು ಬಸವಣ್ಣನವರು. ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ವಿಶ್ವದ ಸಾಂಸ್ಕೃತಿಕ ನಾಯಕ ಎಂದರು.

ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ ಮಾತನಾಡಿ, ಬಸವಣ್ಣನವರನ್ನು ಒಂದು ಧರ್ಮ, ಜಾತಿಗೆ ಸೀಮಿತಗೊಳಿಸುವ ಕಾರ್ಯ ಸಲ್ಲದು. ಬಸವಣ್ಣನವರು ವಿಶ್ವನಾಯಕರು. ಸಮಾನತೆಯ ಹರಿಕಾರರು ಎಂದರು.

ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ, ಶತಶತಮಾನಗಳು ಉರುಳಿದರೂ ಬಸವಣ್ಣನವರ ಆದರ್ಶ ಪ್ರಸ್ತುತವೆನಿಸಿವೆ ಎಂದು ತಿಳಿಸಿದರು.

ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣನ ಕಾಯಕ ದಾಸೋಹ ಸಿದ್ಧಾಂತ ವ್ಯಕ್ತಿ ಕಲ್ಯಾಣ ಹಾಗೂ ಸಮಾಜ ಕಲ್ಯಾಣ, ರಾಷ್ಟ್ರನಿರ್ಮಾಣದಲ್ಲಿ ಮಹತ್ವವನ್ನು ಪಡೆದಿವೆ ಎಂದು ಅಭಿಪ್ರಾಯಪಟ್ಟರು.

ಮುರಗೋಡ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಮುರಗೋಡದ ಮಹಾಂತಜ್ಜನವರ ಸದಿಚ್ಛೆಯಿಂದ ಸ್ಥಾಪನೆಗೊಂಡ ಕವಿವಿಯ ಬಸವಪೀಠ ಬಸವಣ್ಣನವರ ಜೀವನಾದರ್ಶಗಳನ್ನು ಜನತೆಗೆ ಮುಟ್ಟಿಸುವ ಮಹತ್ತರ ಸೇವೆ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರಾಗಿ 40 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಡಾ.ಪ್ರಭಾಕರ ಕೋರೆ ಅವರನ್ನು ಟ್ರಸ್ಟ್ ವತಿಯಿಂದ ಸತ್ಕರಿಸಲಾಯಿತು. ಬಸವಪೀಠದ ಸಂಯೋಜಕರಾದ ಡಾ.ಸಿ.ಎಂ.ಕುಂದಗೋಳ, ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ, ಕಾರ್ಯದರ್ಶಿ ಸಿ.ಎಂ. ಕಿತ್ತೂರ, ಎ.ಎಸ್.ಪಾಟೀಲ, ಎಂ.ಜಿ.ಬೊಳಮಲ್ಲ, ಡಾ.ಎಂ.ಎಸ್.ಉಮದಿ, ಎಸ್.ವ್ಹಿ.ಬಾಗಿ, ಸಚಿನ ಖಡಬಡಿ ಇತರರಿದ್ದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.