ಮುಂಡಗೋಡ: ಪಟ್ಟಣದ ಬಸವಣ್ಣ ಹಾಗೂ ವೀರಭದ್ರೇಶ್ವರ ರಥೋತ್ಸವಕ್ಕೆ ಭಾನುವಾರ ಬಾಗಲಕೋಟೆ ಕಲಾದಗಿ ಗುರುಲಿಂಗೇಶ್ವರ ಪಂಚಗೃಹ ಸಂಸ್ಥಾನಮಠದ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಬಸವಣ್ಣ ಹಾಗೂ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಕಳೆದ 33ವರ್ಷಗಳಿಂದ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಇದೀಗ ,ದೇವಸ್ಥಾನ ಆಡಳಿತ ಸಮಿತಿ ನೂತನ ರಥ ನಿರ್ಮಿಸಿದ್ದು ಎಂಟು ದಿನಗಳ ಕಾಲ ವೈಭವದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು ಆರನೇ ದಿನವಾದ ಭಾನುವಾರ ಸಂಜೆ ದೇವಸ್ಥಾನದಿಂದ ಬನ್ನಿಕಟ್ಟಿ ಬನ್ನಿಮಹಾಂಕಾಳಿ ದೇವಸ್ಥಾನ ಮಾರ್ಗದಲ್ಲಿ ರಥೋತ್ಸವ ಜರುಗಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, 33ವರ್ಷಗಳಿಂದ ಸ್ಥಗಿತಗೊಂಡಿದ್ದ ರಥೋತ್ಸವಕ್ಕೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸ್ಥಳಿಯ ಮುಖಂಡರು ಸತತ ಪರಿಶ್ರಮವಹಿಸಿ ನೂತನ ರಥ ಲೋಕಾರ್ಪಣೆಗೋಳಿಸಿದ್ದಾರೆ. ಜಾತ್ರೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಇಂತಹ ಧಾರ್ಮಿಕ ಕಾರ್ಯಗಳು ಮತ್ತಷ್ಟು ನಡೆಯುವಂತಾಗಲಿ. ಬಸವಣ್ಣ ಹಾಗೂ ವೀರಭದ್ರೇಶ್ವರ ಎಲ್ಲ ಜನತೆಗೂ ಒಳಿತನ್ನು ಮಾಡಲಿ ಎಂದರು.
ನವಲಗುಂದ ಗವಿಮಠದ ಶ್ರೀಬಸವಲಿಂಗ ಮಹಾಸ್ವಾಮಿ ಹಾಗೂ ಹಳೂರ ಹಿರೇಮಠದ ಶ್ರೀ ರುದ್ರಮುನಿ ಸ್ವಾಮಿಗಳು, ಬಸವರಾಜ ಹಂಚಿನಮನಿ, ನಾಗರಾಜ ಗಾಣಿಗೇರ, ಶಂಕರಣ್ಣ ಕೋರಿ, ಶಿವಜ್ಯೋತಿ ಹುದ್ಲಮನಿ, ಅಮರ ಗಾಣಿಗೇರ, ಬಸವರಾಜ ಗಾಣಿಗೇರ, ಸುರೇಶ ಹೊಸಕೇರಿ, ಜಿನರಾಜ ಹದಳಗಿ ನೇತೃತ್ವದಲ್ಲಿ ರಥೋತ್ಸವ ಜರುಗಿತು.