ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪ್ರಾಂಶುಪಾಲ ಪ್ರೊ.ಎಸ್.ಮಂಜು, ಡಾ.ನಂಜುಂಡಸ್ವಾಮಿ, ಡಾ.ಎನ್.ಕರುಣಾಕರ್ ಇದ್ದರು. 
ಜಿಲ್ಲೆ

ಸಮ ಸಮಾಜಕ್ಕಾಗಿ ಹೋರಾಡಿದ ಸಾಂಸ್ಕೃತಿಕ ನಾಯಕ ಬಸವಣ್ಣ

ಹುಣಸೂರು: ಜಗಜ್ಯೋತಿ ಬಸವಣ್ಣ ನಂಬಿದ್ದು ರಕ್ತಕ್ರಾಂತಿ ಮೂಲಕ ಬದಲಾವಣೆಯಲ್ಲ. ಬದಲಾಗಿ ಮನುಷ್ಯರ ನಡುವಿನ ನಿಷ್ಕಲ್ಮಶ ಪ್ರೀತಿ, ಸ್ನೇಹಗಳ ಉತ್ಕಾಂತಿ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಬಸವಣ್ಣನವರ 134ನೇ ಜಯಂತಿ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಬಸವಣ್ಣ ಎಂದರೆ ಸಮಾನತೆ ಮತ್ತು ಮಾನವೀಯತೆಯ ಸಂಕೇತ. ಅಲ್ಲದೆ ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಅವರು ರಕ್ತಕ್ರಾಂತಿಯ ಮೂಲಕ ಬದಲಾವಣೆಯ ನಿರೀಕ್ಷೆ ಮಾಡಲಿಲ್ಲ. ಬದಲಾಗಿ ಮನುಷ್ಯರ ನಡುವಿನ ಸ್ನೇಹ, ಪ್ರೇಮದ ಮೂಲಕ ಮಾತ್ರ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ನಂಬಿದ್ದರು. ಜಾತಿ ಭೇದವನ್ನು ತೊಡೆದು ಹಾಕಲು ಮಾನವ ಪ್ರೇಮಕ್ಕಾಗಿ ಮದುವೆ ಮಾಡಿಸಿದರು. ಇದು ಮನುಷ್ಯ ಪ್ರೇಮದ ಸಂಕೇತ ಎಂದರು.

ಯಾವುದು ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತದೆಯೋ ಅಂತಹ ಆಚರಣೆ ಮೌಢ್ಯದಿಂದ ಕೂಡಿರುತ್ತದೆ. ಬುದ್ಧ, ಬಸವಣ್ಣ, ಕುವೆಂಪು, ಅಂಬೇಡ್ಕರ್ ಇವರೆಲ್ಲರೂ ಮೌಢ್ಯವನ್ನು ವಿರೋಧಿಸಿದ್ದರು. ಬಸವಣ್ಣ ಎಡಗೈಯಲ್ಲಿ ಲಿಂಗ ಹಿಡಿದುಕೊಳ್ಳುವ ಮೂಲಕ ಕ್ರಾಂತಿಗೆ ಮೊದಲಿಗರಾದರು. ಮಾನವ ಕುಲವೇ ಶ್ರೇಷ್ಠ. ಜಾತಿ, ಬಣ್ಣ, ಮತ ಧರ್ಮ ಇದ್ಯಾವುದೂ ಶ್ರೇಷ್ಠವಲ್ಲ. ಬಹುಜನ ಸಂಸ್ಕೃತಿಯಲ್ಲಿ ಸಮ ಸಮಾಜಕ್ಕಾಗಿ ತಮ್ಮ ಉಸಿರು ಇರುವ ತನಕ ಹೋರಾಡಿದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಸ್.ಮಂಜು ಮಾತನಾಡಿ, ಬಸವಣ್ಣನಂತಹ ಮಹಾತ್ಮರಿಗೆ ಯಾವುದೇ ಜಾತಿ, ಮತ ಇಲ್ಲ. ಬದಲಾಗಿ ಅವರೊಬ್ಬ ವಿಶ್ವಮಾನವ. ದೊಡ್ಡವರು ಯಾವಾಗಲೂ ದೊಡ್ಡ ಮಟ್ಟದಲ್ಲೇ ಯೋಚಿಸುತ್ತಾರೆ. ಆ ಕಾರಣಕ್ಕೆ ಬಸವಣ್ಣ ವಿಶ್ವಮಾನವರಾದರು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ರಾಜಶೇಖರನ್, ಸಹಾಯಕ ಪ್ರಾಧ್ಯಾಪಕರಾದ ಬಿ.ಹನುಮಂತಪ್ಪ, ರಮಣಿನಾಯ್ಕ, ಶಿವಕುಮಾರ್, ಡಾ.ಎನ್.ಕರುಣಾಕರ್ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.