ಕಲಬುರಗಿ: ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ, ಭಾವಚಿತ್ರ ಅನಾವರಣ ಸಮಾರಂಭವೂ ಅವ್ಯಸ್ಥೆಯ ಗೂಡಾಗಿ, ಬಸವ ಭಕ್ತರ ಆಕ್ರೋಶಕ್ಕೆ.ಕಾರಣವಾಯಿತು.
ಬೆಳಗ್ಗೆ 11ಕ್ಕೆ ನಿಗದಿಯಾದ ಕಾರ್ಯಕ್ರಮಕ್ಕೆ ಒಂದುವರೆ ಗಂಟೆ ವಿಳಂಬವಾಗಿ ಆಗಮಿಸಿದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿದರು. ಇದರಿಂದ ಆಕ್ರೋಶಿತ ಬಸವ ಭಕ್ತರು ಕನಿಷ್ಠ ಸೌಜನ್ಯ, ಸಮಯಪ್ರಜ್ಞೆ ಇಲ್ಲವೇ ಎಂದು ಕಿಡಿ ಕಾರಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಕನಿಷ್ಠ ಒಂದು ಬ್ಯಾನರ್ ಕಟ್ಟಲು ಸಹ ಆಗುವುದಿಲ್ಲವೇ, ಇಡೀ ಸಮಾಜಕ್ಕೆ ಮಹತ್ವದ ಸಂದೇಶ ಸಾರಬೇಕಾದ ಕಾರ್ಯಕ್ರಮ ಕಾಟಾಚಾರಕ್ಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಬ್ಯಾನರ್ ಕಟ್ಟುವವರೆಗೆ ಕಾರ್ಯಕ್ರಮಕ್ಕೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದು ವಾಗ್ವಾದ ನಡೆಸಿದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಶಾಸಕ ಅಲ್ಲಮಪ್ರಭು ಪಾಟೀಲ್ ಎಷ್ಟೇ ಮನವೊಲಿಸಿದರು ಬಸವ ಭಕ್ತರು ಪಟ್ಟು ಸಡಿಲಿಸಲಿಲ್ಲ. ಇದರಿಂದ ಅನಿವಾರ್ಯಕ್ಕೆ ಒಳಗಾದ ಜಿಲ್ಲಾಡಳಿತ ಅರ್ಧಗಂಟೆ ನಂತರ ಬೃಹತ್ ಬ್ಯಾನರ್ ಪ್ರಿಂಟ್ ಹಾಕಿಸಿ ತಂದು ಅಳವಡಿಸಲಾಯಿತು.
ಬ್ಯಾನರ್ ಅಳವಡಿಕೆಯ ಸುಮಾರು ಎರಡು ಗಂಟೆ ನಂತರ ಕಾರ್ಯಕ್ರಮ ಆರಂಭವಾಗಿ, ನಂತರ ಭಾವಚಿತ್ರ ಅನಾವರಣ ಗೊಳಿಸಲಾಯಿತು.
ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆತಂದಿದ್ದು, ಅವರಿಗೆ ಕುಡಿಯಲು ನೀರು ಸಹ ವ್ಯವಸ್ಥೆ ಮಾಡಿರಲಿಲ್ಲ. ಮಕ್ಕಳ ಪರದಾಟ ಕಂಡು ಗಂಟೆ ನಂತರ ನೀರು ನೀಡಲಾಯಿತು. ಬೃಹತ್ ಸಮಾರಂಭದಲ್ಲಿ ಎರಡು ಸಣ್ಣ ಸೌಂಡ್ ಬಾಕ್ಸ್ ಗಳನ್ನು ಅಳವಡಿಸಿದ್ದು, ಕಂಡು ಬಂತು.