ಜಿಲ್ಲೆ

ಬಸವಣ್ಣನ ದಾರಿಯಲ್ಲಿ ಮಠ-ಮಾನ್ಯಗಳು ಸಾಗಲಿ

ಪ್ರಶಾಂತ ಹೂಗಾರ

ಅಥಣಿ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮಾಡಿರುವ ಸಾಮಾಜಿಕ ಕ್ರಾಂತಿಯಿಂದ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಬಲಯುತವಾಗಿದೆ. ಮಠ-ಮಾನ್ಯಗಳು ಅದೇ ದಾರಿಯಲ್ಲಿ ಸಾಗಿ ಸಮಾಜಮುಖಿ ಸೇವೆ ಮಾಡುವುದರ ಜತೆಗೆ ಕಾಯಕ, ದಾಸೋಹದ ಅರಿವು ಮೂಡಿಸಿ ಭಕ್ತರನ್ನು ಉದ್ಧರಿಸುತ್ತಿವೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಸ್ಥಳೀಯ ಮೋಟಗಿಮಠದ ಶ್ರೀಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕರುನಾಡ ಕಲಾಭೂಷಣ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಮೋಟಗಿಮಠದ ಪ್ರಭುಚನ್ನಬಸವ ಶ್ರೀಗಳ ಕ್ರಿಯಾಶೀಲತೆ, ಸಂಘಟನೆಯಿಂದ ಇಂತಹ ಬೃಹತ್ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ. ಸಂವಿಧಾನದಲ್ಲಿ ಬಸವಣ್ಣನವರ ವಚನಗಳು ಅಡಕವಾಗಿವೆ. 800 ವರ್ಷಗಳ ಹಿಂದೆ ಅವರು ಸಾರಿದ ಸಮಾನತೆ ಇಂದು ನಾವು ಅನುಭವಿಸುವಂತಾಗಿದೆ. ಸಮಾಜಕ್ಕೆ ಬಸವಣ್ಣನವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶೇಗುಣಿಸಿ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಸ್ವಾಮೀಜಿಗಳೆಂದರೆ ಸಮಾಜಮುಖಿ ಸೇವೆಗಳಲ್ಲಿ ತೊಡಗಿರುವ ನಿಷ್ಠಾವಂತ ಸೇವಕರು. ಅಕ್ಷರ ಕಲಿತವರು ಭ್ರಷ್ಟರಾಗಬಹುದು. ಆದರೆ, ಸಂಸ್ಕಾರ ಕಲಿತವರು ಭ್ರಷ್ಟರಾಗುವುದಿಲ್ಲ ಎಂದು ತಿಳಿಸಿದರು.

ತೋಂಟದಾರ್ಯಮಠದ ನಿಜಗುಣಪ್ರಭು ಸ್ವಾಮೀಜಿ ಮಾತನಾಡಿ, ಅಭಿವೃದ್ಧಿಗೆ ಮಠ-ಮಾನ್ಯಗಳು ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ನಿಡಸೋಸಿ ಸಿದ್ಧಸಂಸ್ಥಾನಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಅಥಣಿ ಸಾಂಸ್ಕೃತಿಕವಾಗಿ ಸಮೃದ್ಧವಾಗಿದೆ. ಇಲ್ಲಿಯ ಮಠಗಳು ಬಸವಾದಿ ಶಿವಶರಣರ ಸಂದೇಶಗಳನ್ನು ನಿರಂತರವಾಗಿ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿವೆ. ಮೋಟಗಿಮಠದ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಮಹಾಂತ ಸ್ವಾಮೀಜಿ, ರಮೇಶ ಸುರ್ವೆ, ದೇವೆಂದ್ರಕುಮಾರ ಪತ್ತಾರ, ರವೀಂದ್ರ ಸೂರಗಾಂವಿ, ಶಿವರುದ್ರಯ್ಯ ಗೌಡಗಾಂವ, ವೆಂಕಟೇಶ ಅಲ್ಕೋಡ, ವೀರೇಶ ವಾಲಿ, ಗೋಪಿ, ಶ್ರೀನಿವಾಸ, ಕಲ್ಲೋಳೆಪ್ಪ ಭಜಂತ್ರಿ ಸೇರಿ ಹಲವರಿಗೆ ಕರುನಾಡ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಅಲ್ಲಮಪ್ರಭು ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಗುರುದೇವ ದೇವರು, ಕಾಶಿನಾಥ ಸ್ವಾಮೀಜಿ, ಪ್ರಭುಕುಮಾರ ಸ್ವಾಮೀಜಿ, ಸಮಾಜ ಸೇವಕ ಗಜಾನನ ಮಂಗಸೂಳಿ ಇತರರಿದ್ದರು.