ಜಿಲ್ಲೆ

ಮಕ್ಕಳಿಗೆ ಬಸವಣ್ಣನ ವಚನವನ್ನು ಅರ್ಥೈಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರತಿ ಮನೆಯಲ್ಲಿ ಮಕ್ಕಳಿಗೆ ಬಸವಣ್ಣನವರ ವಚನಗಳನ್ನು ತಿಳಿಸುವುದರ ಜತೆಗೆ ಅದರ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವಣ್ಣ ಮತ್ತು ಹೇಮರೆಡ್ಡಿ ಮಲ್ಲಮ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಜ್ಞಾನ ಭಂಡಾರವಿದ್ದಂತೆ. ಅವರ ಚಿಂತನೆ ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಗಜ್ಯೋತಿ ಬಸವಣ್ಣನವರ ಆಧ್ಯಾತ್ಮಿಕ ತತ್ವ ಆದರ್ಶಗಳ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಅವರ ಬಗ್ಗೆ ತಿಳಿಯಲು ಕೇವಲ ತರಗತಿಗಳಲ್ಲಿ ಆಯ್ಕೆ ಮಾಡಿರುವ ಪಾಠ ಗಳಲ್ಲಿ ಒಂದು ಎರಡು ಪುಟಗಳಲ್ಲಿ ತಿಳಿಯಲು ಸಾಧ್ಯವಿಲ್ಲ. ಕಾರಣ ಅವರೊಬ್ಬ ಜ್ಞಾನ ಭಂಡಾರ ವಿದ್ದಂತೆ. ಈಗಿನ ಕಾಲದಲ್ಲಿ ಸಮಾಜವನ್ನು ಎದುರು ಹಾಕಿಕೊಂಡು ಬದುಕುವುದು ಸುಲಭ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಾಗಿದ್ದಾರೆ. ಆದರೆ ಬಸವಣ್ಣನವರು ಅಂದಿನ ಕಾಲದಲ್ಲೇ ಸಮಾಜವನ್ನು ಎದುರು ಹಾಕಿಕೊಂಡು ಜಾತಿ ಪದ್ಧತಿಯನ್ನು ಹೋಗಲಾಡಿಸಲು ಪ್ರತಿಯೊಬ್ಬರಿಗೂ ವಚನಗಳ ಮೂಲಕ ವಿಚಾರ ವಿನಿಮಯ ಮಾಡುತ್ತಿದ್ದರು ಎಂದರು.

ದೇವಾಲಯಕ್ಕೆ ಹೋಗಿ ಕೈ ಮುಗಿದು ಕೊಂಡು ಬಂದರೆ ಸಾಲದು. ನಾವು ಮಾಡುವಂತಹ ಕೆಲಸ ಕಾರ್ಯದಲ್ಲಿ ದೇವರನ್ನು ಕಾಣಬೇಕೆಂದ ಬಸವಣ್ಣನವರು, ದೇಹವೇ ದೇಗುಲ, ಶಿರವೇ ಕಳಸ ಎಂಬ ನುಡಿಯನ್ನು ಪಾಲಿಸಬೇಕು, ಮಾನವೀಯತೆ ಗಿಂತ ದೊಡ್ಡದ್ದು ಯಾವುದು ಇಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದವರು. ಸಾಂಸ್ಕೃತಿಕ ಹರಿಕಾರ ಬಸವಣ್ಣನವರ ವಚನಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ ಅವರು ನೀಡಿದ ವಚನಗಳ ಪುಸ್ತಕಗಳನ್ನು ಜಗತ್ತಿನಾದ್ಯಂತ ನೋಡಬಹುದು. ಕಾಯಕವೇ ಕೈಲಾಸ ಎಂಬ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಅನುಭವ ಮಂಟಪದಲ್ಲಿ ಲಕ್ಷಾಂತರ ಜನರು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು ಹಾಗೂ ಅನ್ನ ದಾಸೋಹ ಸಹ ನಡೆಸಲಾಗುತ್ತಿತ್ತು. ಜ್ಞಾನ ಮತ್ತು ಅನ್ನ ದಾಸೋಹ ನಡೆಸುವುದರ ಜತೆಗೆ ಜನರಿಗೆ ಅರ್ಥವಾಗುವ ಸರಳವಾಗಿ ವಚನಗಳ ಮೂಲಕ ಜೀವನದ ಸಂದೇಶಗಳನ್ನು ನೀಡಿದರು. ಅವರು ನೀಡಿರುವ ವಚನಗಳು ಇಂದಿಗೂ ಪ್ರಸ್ತುತ ಎಂದರು.

ಮಹಾಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿ ಮದುವೆ ಆದ ನಂತರ ತನ್ನ ಸಂಸಾರದಲ್ಲಿ ಅಥವಾ ಸುತ್ತಮುತ್ತ ಪರಿಸರದಲ್ಲಿ ಕಂಡಂತಹ ತೊಡಕುಗಳನ್ನು, ಸಮಸ್ಯೆಗಳನ್ನು ಆಧ್ಯಾತ್ಮಿಕ ನೆಲಗಟ್ಟೆಯಲ್ಲೆ ಮನ ಪರಿವರ್ತನೆ ಮಾಡುತ್ತಿದ್ದರು, ಸ್ವತಃ ಆಕೆಯ ಕುಟುಂಬದಲ್ಲಿ ಇದ್ದಂತಹ ಮೈದುನನ ಮನ ಪರಿವರ್ತನೆ ಮಾಡಿದರು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಬಸವೇಶ್ವರರು ಇಂದಿಗೂ ಅಮೋಘ ಮತ್ತು ಅದ್ಭುತವಾದ ವ್ಯಕ್ತಿಯಾಗಿ ಕಾಣುತ್ತಾರೆ. 12ನೇ ಶತಮಾನದಲ್ಲಿದ್ದ ಜಾತಿ, ಧರ್ಮ, ಲಿಂಗ, ಅಸ್ಪ್ರಶ್ಯತೆಯಂತಹ ಅಸಮಾನತೆಯ ಅಡ್ಡ ಗೋಡೆಗಳನ್ನು ತೊಡೆದು ಹಾಕಿ ಜನರಿಗೆ ಧೈರ್ಯ, ಆತ್ಮ ವಿಶ್ವಾಸವನ್ನು ತುಂಬಿ ಸಮಾಜದಲ್ಲಿ ಸಮಾನತೆಯ ಕ್ರಾಂತಿಯನ್ನು ನಡೆಸಿ ಕ್ರಾಂತಿಕಾರಿ ಬಸವಣ್ಣ ಎನಿಸಿಕೊಂಡವರು. ಅವರ ಅನುಯಾಯಿಗಳಾಗಿ ಕಾಯಕ ತತ್ವದ ಮೂಲಕ ಅವತ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಂಡಿದ್ದಾರೆ. ಅದರಂತೆ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ನಿರಂತರ ಕಾಯಕದ ಮೂಲಕ ಸಮಾಜ ಕಟ್ಟೋಣ ಎಂದರು.

ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಸಮಾಜ ಸೇವಕಿ ರಜಿನಿರಾಜ್, ವಕೀಲ ಗುರುಪ್ರಸಾದ್ ಇತರರಿದ್ದರು.