ಲಿಂಗಸುಗೂರು ಶ್ರೀ ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಸ್ವಾಮೀಜಿಗಳು ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಜಗದ್ಗುರು ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳ ಮಠದ ಶ್ರೀ ಸಿದ್ಧಬಸವ ದೇವರು, ಇಳಕಲ್ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪದ ಸಿದ್ಧಲಿಂಗ ಸ್ವಾಮೀಜಿ, ಹುಣಸಿಹಾಳ ಸಂಗನಬಸವ ದೇವರು ಇದ್ದರು. 
ಜಿಲ್ಲೆ

ಬಸವಣ್ಣ ದೇಶವಾಸಿ ಅಲ್ಲ ವಿಶ್ವವಾಸಿ

ಲಿಂಗಸುಗೂರು: ಬಸವಣ್ಣನವರು ಒಂದೇ ಮತ, ಸಮುದಾಯಕ್ಕೆ ಉಪದೇಶ ನೀಡಿಲ್ಲ. ಅವರು ದೇಶವಾಸಿ ಅಲ್ಲ ವಿಶ್ವವಾಸಿ ಎಂದು ಯಮಕನಮರಡಿ ಜಗದ್ಗುರು ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳ ಮಠದ ಶ್ರೀ ಸಿದ್ಧಬಸವ ದೇವರು ಹೇಳಿದರು.

ಪಟ್ಟಣದ ಶ್ರೀ ವಿಜಯಮಹಾಂತೇಶ್ವರ ಶಾಖಾ ಮಠದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೆ ನಿಮಿತ್ತ ಬುಧವಾರ ಶರಣ ಸಂಸ್ಕೃತಿ ಮಹೋತ್ಸವದ ವಿಶ್ವಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣ ಅವರ ಕಾಲದಲ್ಲಿ ಕಲ್ಯಾಣ ಚಾಲುಕ್ಯರ ಗಡಿರೇಖೆ ವಿಸ್ತಾರ, ಆರ್ಥಿಕ ಸುಧಾರಣೆ, ಪ್ರಶಾಂತ ಮಾನವೀಯ ಮೌಲ್ಯ ಮತ್ತು ಉತ್ತಮ ಸಾಮಾಜಿಕ ಅಭಿವೃದ್ಧಿ ಕಂಡಿತ್ತು. ಇದು ಪ್ರಸ್ತುತ ದೇಶದ ರಾಜಕೀಯ ವ್ಯವಸ್ಥೆಗೆ ಆದರ್ಶ ಮತ್ತು ಅನುಕೂಲವಾಗಿದೆ ಎಂದು ತಿಳಿಸಿದರು.

ಇಳಕಲ್ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಶ್ರೀ ವಿಜಯಮಹಾಂತ ಶಿವಯೋಗಿಗಳ ಪರಂಪರೆಯಲ್ಲಿ ಲಿಂಗಸುಗೂರು ಶಾಖಾ ಅನುಭವ ಮಂಟಪದಲ್ಲಿ ಪ್ರವಚನ, ವಚನ ಪಲ್ಲಕ್ಕಿ ಉತ್ಸವ, ಅನುಭಾವಿಗಳ ಉಪನ್ಯಾಸ ಸೇರಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.