ನಂಜನಗೂಡು: ಬಸವಾದಿ ಶಿವ ಶರಣರ ವಚನಗಳಲ್ಲಿ ಬದುಕಿಗೆ ಬೇಕಾದ ಎಲ್ಲ ಸಂದೇಶಗಳಿವೆ. ಅವುಗಳನ್ನು ನಮ್ಮ ಬದುಕಿನ ಆದರ್ಶವಾಗಿಸಿಕೊಂಡು ಜೀವನ ಸಾಗಿಸಲು ಮುಂದಾಗಬೇಕು ಎಂದು ಬಸವ ಕಲ್ಯಾಣದ ಪೂಜ್ಯ ಸುಗುಣಾ ಮಾತಾಜಿ ಹೇಳಿದರು.
ನಗರದ ವಿಶ್ವ ಗುರು ಬಸವೇಶ್ವರ ವೃತ್ತದಲ್ಲಿ ಸಮೃದ್ಧಿ ಗೆಳೆಯರ ಬಳಗದಿಂದ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಬಸವಣ್ಣನವರು ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ದಾರ್ಶನಿಕರಾಗಿದ್ದು, ಸಮಾಜದಲ್ಲಿದ್ದ ಎಲ್ಲ ತಾರತಮ್ಯಗಳನ್ನು ಹೋಗಲಾಡಿಸಿ ಭೋಗಕ್ಕೆ ಸೀಮಿತವಾಗಿದ್ದ ಮಹಿಳೆಯರನ್ನು ಪುರುಷರಿಗೆ ಸರಿ ಸಮನಾಗಿ ಕಾಣುವುದರ ಮೂಲಕ ಸ್ತ್ರೀ ಸ್ವಾತಂತ್ರೃವನ್ನು ಎತ್ತಿ ಹಿಡಿದು ಮಹಿಳೆಯರ ಆತ್ಮಗೌರವ ಹೆಚ್ಚಿಸಿದರು. ಪ್ರತಿಯೊಬ್ಬರೂ ದುಡಿದು ತಿನ್ನಬೇಕೆಂಬ ಕಾಯಕ ಹಾಗೂ ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಕಾಯಕದಲ್ಲಿ ಹಿರಿದು-ಕಿರಿದು ಎನ್ನುವುದಿಲ್ಲ. ಹೀಗಾಗಿ ಎಲ್ಲರ ಕಾಯಕವನ್ನು ಗೌರವಿಸಬೇಕು ಎಂದು ನುಡಿದರು.
ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ನಡೆ ನುಡಿಯಿಂದ ಮಾತ್ರ ಶ್ರೇಷ್ಠನಾಗಲು ಸಾಧ್ಯ ಎನ್ನುವುದಕ್ಕೆ ದೇಶದ ವಿವಿಧ ಮೂಲೆಗಳಿಂದ ಕಲ್ಯಾಣಕ್ಕೆ ಬಂದು ವಿವಿಧ ಕಾಯಕದಲ್ಲಿ ತೊಡಗಿಸಿಕೊಂಡ ನೂರಾರು ಶರಣರೇ ಸಾಕ್ಷಿ. ಬಸವ ಧರ್ಮದಲ್ಲಿ ಹುಟ್ಟಿದ ನಾವೇ ಧನ್ಯರು. ಮನಃ ಶುದ್ಧಿಗಾಗಿ ಶಿವಯೋಗ ತನು ಶುದ್ಧಿಗಾಗಿ ಕಾಯಕವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಸಮೃದ್ಧಿ ಗೆಳೆಯರ ಬಳಗದ ಕಲ್ಮಳ್ಳಿ ನಟರಾಜು, ಕಾರ್ಯದರ್ಶಿ ಸುರೇಶ್, ಸಂಚಾಲಕ ಹುಸ್ಕೂರು ರಾಜಶೇಖರ್, ಬಸವ ಬಳಗದ ಅಧ್ಯಕ್ಷ ಸೋಮಣ್ಣ, ನಾಗೇಂದ್ರ, ನಂದಿನಿ, ಡಾ.ಮಹೇಶ್, ಬಾಂಧವ್ಯ ಬಳಗದ ಅಧ್ಯಕ್ಷ ಶಾಂತಮಲ್ಲಪ್ಪ, ಗುರು ಮಲ್ಲಪ್ಪ, ರಾಚಪ್ಪಾಜಿ, ಬದನವಾಳು ಮಹದೇವಪ್ಪ, ವೀರಶೈವ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ.ಬಸವಣ್ಣ, ಆಯರಹಳ್ಳಿ ಪ್ರಭುಸ್ವಾಮಿ, ಮಹದೇವಪ್ಪ, ದೇವನೂರು ತ್ಯಾಗಿ, ಪ್ರತಿಧ್ವನಿ ವೇದಿಕೆ ಅಧ್ಯಕ್ಷ ತ್ರಿನೇಶ್, ಲೋಕೇಶ್, ಪಿಡಿಒ ಸುತ್ತೂರು ಚಿನ್ನಬುದ್ಧಿ, ಮಹದೇಶ್ವರ ಬಳಗದ ಪುಟ್ಟಬುದ್ಧಿ, ಮರಿಸ್ವಾಮಿ, ದೇವನೂರು ಲೋಕೇಶ್ ಭಾಗವಹಿಸಿದ್ದರು.