ದೊಡ್ಡಬಳ್ಳಾಪುರ: ಕಾರ್ತಿಕ ಮಾಸದ ಕಡೆಯ ಸೋಮವಾರದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಇಲ್ಲಿನ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ಬಯಲು ಬಸವಣ್ಣ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮದಿಂದ ನಡೆಯಿತು.
ಪರಿಷೆ ಅಂಗವಾಗಿ ದೇವಾಲಯಕ್ಕೆ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಶ್ರೀಬಯಲು ಬಸವಣ್ಣ ದೇವಸ್ಥಾನದ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ನೇತತ್ವದಲ್ಲಿ ಕಡಲೆಕಾಯಿ ಪರಿಷೆ, ಕರ್ನಾಟಕ ರಾಜ್ಯೋತ್ಸವ ಮತ್ತು ಸಂಘದ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು.
ರಾಜಕೀಯ ಪಕ್ಷಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ನಾನಾ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
ಮೈನವಿರೇಳಿಸುವ ಕುಸ್ತಿ ಪಂದ್ಯಾವಳಿ
ಕುಸ್ತಿ ಅಖಾಡದಲ್ಲಿ ಎದುರಾಳಿ ಮಣಿಸಲು ಪಟ್ಟು ಹಾಕುತ್ತಿದ್ದ ಪೈಲ್ವಾನರು... ಸುತ್ತಲೂ ನೆರೆದಿದ್ದ ಪ್ರೇಕ್ಷಕರ ಕೇಕೆ, ಚಪ್ಪಾಳೆ.. ನೆಚ್ಚಿನ ಪೈಲ್ವಾನರು ನೆಲಕ್ಕುರುಳಿದಾಗ ಓಹೋ ಎಂಬ ಉದ್ಗಾರ...
ಮೈ ನವಿರೇಳಿಸುವಂತಿದ್ದ ಪುರುಷ ಹಾಗೂ ಮಹಿಳಾ ಪೈಲ್ವಾನರ ಸೆಣಸಾಟಕ್ಕೆ ಸಾಕ್ಷಿಯಾಗಿದ್ದು ಬಸವಣ್ಣ ದೇವಾಲಯದ ಕಡಲೆಕಾಯಿ ಪರಿಷೆ ಅಂಗವಾಗಿ ಇದೇ ಮೊದಲ ಬಾರಿಗೆ ಸೋಮವಾರ ಹಮ್ಮಿಕೊಂಡಿದ್ದ ಹೊನಲುಬೆಳಕಿನ ಮಟ್ಟಿ ಕುಸ್ತಿ ಪಂದ್ಯಾವಳಿ.
ಪಂದ್ಯಾವಳಿಗೆ ಚಾಲನೆ ದೊರೆಯುತ್ತಿದ್ದಂತೆ ಕುಸ್ತಿ ಪಟುಗಳು ಅಖಾಡಕ್ಕಿಳಿದು ಸೆಣಸಿದರು. 9 ಜಿಲ್ಲೆಗಳಿಂದ 300 ಮಂದಿ ಪುರುಷ ಕುಸ್ತಿ ಪಟುಗಳು ಮತ್ತು 50 ಮಂದಿ ಮಹಿಳಾ ಕುಸ್ತಿಪಟುಗಳು ಆಗಮಿಸಿದ್ದರು.
ಕುಸ್ತಿಪಟುಗಳ ತೂಕಗಳ ಮಾನದಂಡಕ್ಕೆ ಅನುಸಾರ ದೊಡ್ಡಬಳ್ಳಾಪುರ ಯುವ ಕಿಶೋರ, ದೊಡ್ಡಬಳ್ಳಾಪುರ ಕಿಶೋರ, ದೊಡ್ಡಬಳ್ಳಾಪುರ ಕುಮಾರ, ದೊಡ್ಡಬಳ್ಳಾಪುರ ಕೇಸರಿ, ದೊಡ್ಡಬಳ್ಳಾಪುರ ಕಂಠೀರವ ಹಾಗೂ ಮಹಿಳಾ ವಿಭಾಗದಲ್ಲಿ (60 ಕೆ.ಜಿ. ಒಳಗಿನ ವಿಭಾಗ) ದೊಡ್ಡಬಳ್ಳಾಪುರ ಕಿಶೋರಿ ವಿಭಾಗಗಳಲ್ಲಿ ಪಂದ್ಯಗಳು ನಡೆದವು.
ಪಂದ್ಯಾವಳಿಯಲ್ಲಿ ತಾಲೂಕು ಕುಸ್ತಿ ಸಂಘದ ಗೌರವ ಅಧ್ಯಕ್ಷ, ಚೌಡಪ್ಪ, ಪಿಳ್ಳಣ್ಣ, ಅಧ್ಯಕ್ಷ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಎಸ್.ಪದ್ಮನಾಭ್, ಖಜಾಂಚಿ ವಿಶ್ವನಾಥ್, ಸಂಘದ ಕಾರ್ಯದರ್ಶಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಗಣೇಶ್ ರಾಜಘಟ್ಟ, ಸಂಘದ ಮುನಿವೆಂಕಟೇಶ್, ಸುಬ್ಬು, ಅರುಣ್ ಇದ್ದರು.