ಜಿಲ್ಲೆ

ಸಮಾನತೆಯ ಅರಿವು ಮೂಡಿಸಿದ ಬಸವಣ್ಣ

ಕೆಜಿಎಫ್​- ಹನ್ನೇರಡನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ತಮ್ಮ ಕಾಯಕ, ಕ್ರಾಂತಿ, ವಚನಗಳ ಮೂಲಕ ಜಗತ್ತಿನಾದ್ಯಂತ ಸಮಾನತೆಯ ಅರಿವು ಮೂಡಿಸಿ ಮಹಾನ್​ ಶಕ್ತಿಯಾಗಿದ್ದರು ಎಂದು ಗವಿಮಠದ ಪೀಠಾಧಿಪತಿ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಬೆಮೆಲ್​ನಗರದ ಕಲಾಕ್ಷೇತ್ರ ರಂಗಮಂದಿರದಲ್ಲಿ ಮಂಗಳವಾರ ಬಸವ ಸಮಿತಿ ಹಮ್ಮಿಕೊಂಡಿದ್ದ ಬಸವ ಸಮಿತಿಯ ಸುವರ್ಣ ಶರಣಾಮೃತ ಸ್ಮರಣ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರು ತಮ್ಮ ವಚನಗಳ ಮೂಲಕ ಜಾತಿ, ಮತ, ಕುಲಗಳ ಭೇದ ಭಾವವನ್ನು ತೊಡೆದು ಹಾಕಲು ಸಮಾಜದ ಪಿಡುಗಗಳ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು. ಇರುವ ವಾಸ್ತವವನ್ನು ಇದ್ದಂತೆಯೇ ಹೇಳಿದ ಮಹಾನ್​ ಚೇತನ. ನಿಯಮ ಕಟ್ಟುಪಾಡುಗಳನ್ನು ಬಯಲು ಮಾಡಿದ ನಿರೂಪಣೆಗಾರ ಎಂದು ಬಣ್ಣಿಸಿದರು.

ಬಸವಣ್ಣನವರ ಮಾರ್ಗದಂತೆ ಪ್ರತಿಯೊಬ್ಬರು ಸಹ ತಮ್ಮ ಕಾಯಕ ಮಾಡಿದರೆ ಸಮಾಜದಲ್ಲಿ ಸುಧಾರಣೆ ಕಾಣಬಹುದು. ಹತ್ತು ಹಲವು ಬಗೆಯ ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳಬೇಕೆಂದು ಹಾಗೂ ಬಸವಣ್ಣನವರ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಕೋಲಾರ ಚಿನ್ನದ ಗಣಿ ಪ್ರದೇಶವು ತಮಿಳುನಾಡು, ಆಂದ್ರಪ್ರದೇಶದ ಗಡಿ ಭಾಗದಲ್ಲಿದ್ದು, ಮೂರು ರಾಜ್ಯಗಳ ಸಂಗಮ ಗಡಿನಾಡು ಕೆಜಿಎಫ್​ನಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಬಸವ ಸಮಿತಿಯು 50 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವುದು ಸಂತಸ ತಂದಿದೆ ಎಂದರು.

ಜಾನಪದ ಕಲಾ ತಂಡಗಳಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಸುವರ್ಣ ಶರಣಾಮೃತ ಸ್ಮರಣ ಸಂಚಿಕೆ ಲೋಕಾರ್ಪಣೆಗೆ ಸಹಕರಿಸಿದ ಬಸವ ಸಮಿತಿ, ಅಕ್ಕನ ಬಳಗದ ಸದಸ್ಯರನ್ನು ಸನ್ಮಾನಿಸಲಾಯಿತು.

ಬಸವ ಸಮಿತಿ, ಅಕ್ಕನ ಬಳಗ, ಶ್ರೀ ಬಸವೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.