ಅಥಣಿ: ವ್ಯಸನಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಶಂಕರನಗದಲ್ಲಿ ಮೋಟಗಿಮಠದ ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಆದರ್ಶಗಳನ್ನು ಎಲ್ಲರೂ ಸಾಗಬೇಕು. ಅವರ ವಚನಗಳನ್ನು ಅರಿತುಕೊಂಡು ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ನೀಡಬೇಕು. ಕಾಯಕ ತತ್ತ್ವದಡಿ ನಂಬಿಕೆಯಿಟ್ಟು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಮುದಗಲ್ಲದ ಮಹಾಂತ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಕಾಯಕ, ದಾಸೋಹ, ಲಿಂಗಪೂಜೆ, ಧ್ಯಾನ, ಯೋಗಗಳನ್ನು ಕಲಿಸಬೇಕು. ಜಂಜಾಟದ ಬದುಕಿಗೆ ಪಾದಯಾತ್ರೆಗಳು ಸಹಕಾರಿಯಾಗಿವೆ ಎಂದು ತಿಳಿಸಿದರು. ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ದುಶ್ಚಟ ತ್ಯಜಿಸಿ ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕು. ಇಂತಹ ಸಮಾಜಮುಖಿ ಕಾರ್ಯ ಕೈಗೊಂಡಿರುವುದು ಸ್ಮರಣೀಯವಾಗಿದೆ ಎಂದು ಶ್ಲಾಘಿಸಿದರು. ಮುಕ್ತಾಯಿ ಮಹಿಳಾ ಬಳಗ ಅಥಣಿ ಯುವ ವೇದಿಕೆ, ಚನ್ನಬಸವ ಯುವಕ ಸಂಘದ ಸದಸ್ಯರು ಹಾಗೂ ಇತರರಿದ್ದರು