ಬಸವನಬಾಗೇವಾಡಿ: ಜನ ಸಾಮಾನ್ಯರಿಗೆ ಸಮಸ್ಯೆ ಉಂಟಾದಾಗ ಸದಸ್ಯರ ಗಮನಕ್ಕೆ ತರುತ್ತಾರೆ. ಆದರೆ, ಕರೆ ಮಾಡಿದಾಗ ಪುರಸಭೆ ಸಿಬ್ಬಂದಿ ಸದಸ್ಯರ ಕರೆ ಸ್ವೀಕರಿಸಲ್ಲ ಎಂದಾದರೇ ಜನ ಸಾಮಾನ್ಯರ ಕಥೆ ಏನು? ಎಂದು ಪುರಸಭೆ ಸದಸ್ಯ ಅಶೋಕ ಗುಳೇದ ಆರೋಪಿಸಿದರು.
ಪುರಸಭೆ ಸಭಾಭವನದಲ್ಲಿ ಗುರುವಾರ ನಡೆದ ಪುರಸಭೆ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ವಾರ್ಡಿನಲ್ಲಿನ ಸಮಸ್ಯೆಗಳಿಗಾಗಿ ಜನತೆ ಸದಸ್ಯರಿಗೆ ಕರೆ ಮಾಡಿ ಸರಿಪಡಿಸಬೇಕೆಂದು ತಿಳಿಸುತ್ತಾರೆ. ಆದರೆ, ಪುರಸಭೆ ಸಿಬ್ಬಂದಿ ಸದಸ್ಯರ ಕರೆಗಳನ್ನು ಸ್ವೀಕರಿಸಲ್ಲ ಎಂದರೇ ಹೇಗೆ? ಅಷ್ಟು ಬಿಝಿ ಇರುತ್ತೀರಾ? ಎಂದು ಪ್ರಶ್ನಿಸಿದಾಗ ಧ್ವನಿಗೂಡಿಸಿದ ಸದಸ್ಯ ರವಿ ಪಡಶೆಟ್ಟಿ ಅವರು ಇದು ನನ್ನ ಗಮನಕ್ಕೂ ಬಂದಿದೆ. ಮುಖ್ಯಾಧಿಕಾರಿಗಳು ಗಮನಿಸಬೇಕೆಂದಾಗ ಸದಸ್ಯರಾದ ಪ್ರವೀಣ ಪವಾರ, ಅಶೋಕ ಹಾರಿವಾಳ ಸಹಮತ ವ್ಯಕ್ತಪಡಿಸಿದಾಗ ಮುಖ್ಯಾಧಿಕಾರಿ ಬಿ.ಎ. ಸೌದಾಗರ ಸಿಬ್ಬಂದಿಗೆ ಸೂಚಿಸುವುದಾಗಿ ತಿಳಿಸಿದರು.
ಕುಡಿಯುವ ನೀರಿನ ಕರವನ್ನು ಪಾವತಿಸಲು ಜನತೆಗೆ ಸಮಸ್ಯೆಯಾಗಿದ್ದು, ವಾಟರ್ ಬೋರ್ಡ್, ಪುರಸಭೆ, ಬ್ಯಾಂಕ್ ಸೇರಿ ಮೂರು ಕಡೆಗಳಲ್ಲಿ ಅಲೆದಾಡಬೇಕಾಗಿದೆ. ಪುರಸಭೆಯಲ್ಲಿ ಒಂದು ಕೌಂಟರ್ ಮಾಡಬೇಕೆಂದು ಸದಸ್ಯ ಪ್ರವೀಣ ಪವಾರ ಆಗ್ರಹಿಸಿದಾಗ ಮುಖ್ಯಾಧಿಕಾರಿ ಬಿ.ಎ. ಸೌದಾಗರ ಅವರು ಪುರಸಭೆಗೆ ನೇರವಾಗಿ ಹಣ ಸ್ವೀಕರಿಸಲು ಅವಕಾಶವಿಲ್ಲ. ಈಗಾಗಲೇ ವಾಟರ್ ಬೋರ್ಡ್ ಅಧಿಕಾರಿಗಳು ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಮಾತುಕತೆಯಾಗಿದ್ದು, ಶೀಘ್ರ ಪುರಸಭೆಯಲ್ಲಿ ಕೌಂಟರ್ ಆರಂಭಿಸಲಾಗುವುದು ಎಂದರು.
ಪಟ್ಟಣದ ವಿವಿಧ ವೃತ್ತಗಳಲ್ಲಿ ಜನತೆ ಬೇಕಾಬಿಟ್ಟಿಯಾಗಿ ಬ್ಯಾನರ್ ಅಳವಡಿಸುತ್ತಿದ್ದು ಸರಿಪಡಿಸಬೇಕಿದೆ ಎಂದು ಮುಖ್ಯಾಧಿಕಾರಿ ಸೌದಾಗರ ಸಭೆಯ ಗಮನಕ್ಕೆ ತಂದಾಗ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿ ಅಂಥವರಿಗೆ ದಂಡ ವಿಧಿಸಲು ತೀರ್ಮಾನಿಸಲಾಯಿತು. ಅಶೋಕ ಹಾರಿವಾಳ, ರವಿ ಪಡಶೆಟ್ಟಿ, ಮುಖ್ಯಾಧಿಕಾರಿಗಳ ಸಮಿತಿ ರಚಿಸಲಾಯಿತು.
ಬಸವ ನಗರದಲ್ಲಿ ಸರ್ವೇ ನಂ. 331ರ ಜಮೀನದಲ್ಲಿ 1986ರಲ್ಲಿ ಸ್ವಾಧೀನಪಡಿಸಿಕೊಂಡಿದ್ದು, ಜಮೀನು ಪರಿಹಾರ ಧನ ಕಡಿಮೆಯಾಗಿದೆ ಎಂದು ಜಮೀನು ಮಾಲೀಕ ನ್ಯಾಯಾಲಯಕ್ಕೆ ತೆರಳಿದ್ದು ನ್ಯಾಯಾಲಯ ಆದೇಶ ಪ್ರಕಾರ 21ಲಕ್ಷ ರೂ. ಹೆಚ್ಚುವರಿಯಾಗಿ ನೀಡಬೇಕಾಗಿದೆ ಎಂದು ಸದಸ್ಯರು ಸಹಮತ ವ್ಯಕ್ತಪಡಿಸಿದರು.
27 ಲಕ್ಷ ರೂ.ಗಳ 5 ಹೊಸದಾಗಿ ಶುದ್ಧ ಕುಡಿಯುವ ಘಟಕಕ್ಕೆ ಮರು ಟೆಂಡರ್ ಕರೆಯಲು ಸಭೆ ತೀರ್ಮಾನಿಸಿತು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ, ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಬೆಲ್ಲದ, ಸದಸ್ಯರಾದ ರಾಜು ಭೂತನಾಳ, ದೇವೇಂದ್ರ ನಾಯಕ, ರವಿ ನಾಯ್ಕೋಡಿ, ನಜೀರ್ ಗಣಿ, ಅಬ್ದುಲ್‌ರೆಹಮಾನ್ ಚೌಧರಿ, ಪ್ರವೀಣ ಪೂಜಾರಿ, ನೀಲಪ್ಪ ನಾಯಕ, ರಾಜು ಲಮಾಣಿ, ನೀಲಮ್ಮ ಗುಂಡಿ, ಜಗದೇವಿ ಗುಂಡಳ್ಳಿ, ರಜಾನ್ ಚೌಧರಿ, ಸುಭಾಂಗಿಣಿ ಗಾಯಕವಾಡ, ರೇಖಾ ಬೆಕಿನಾಳ, ರಜಾಕಬಿ ಬಮ್ಮನಹಳ್ಳಿ, ರೇಖಾ ಸೊನ್ನದ, ಗೀತಾ ಬಾಗೇವಾಡಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಪುರಸಭೆ ನೂತನ ಸದಸ್ಯರಾಗಿ ಚುನಾಯಿತರಾದ ಸರ್ವ ಸದಸ್ಯರಿಗೆ ಪ್ರಥಮ ಸಾಮಾನ್ಯಸಭೆ ಆರಂಭವಾಗುವ ಮುನ್ನ ಪುರಸಭೆ ಸಿಬ್ಬಂದಿ ಸನ್ಮಾನಿಸಿ ಸಭೆಗೆ ಆಹ್ವಾನಿಸಿದರು. ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಥಮ ಸಾಮಾನ್ಯಸಭೆ ಆರಂಭವಾಯಿತು.